ಭಾಗಮಂಡಲ, ಆ. 22: ಮಹಾಮಳೆಯಿಂದ ಉಂಟಾದ ಪ್ರವಾಹದಿಂದ ರೈತರು ಅಕ್ಷರಶ: ನಲುಗಿ ಹೋಗಿದ್ದಾರೆ. ಭಾಗಮಂಡಲ ವ್ಯಾಪ್ತಿಯ ನದಿ ತಟದ ಗದ್ದೆಗಳು ಜಲಾವೃತವಾಗಿದ್ದು ಅಪಾರ ಪ್ರಮಾಣದ ಭತ್ತದ ಸಸಿಮಡಿಗಳು ನಾಶವಾಗಿವೆ.

ಭಾಗಮಂಡಲ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳು ಜಲಪ್ರಳಯದಿಂದ ತತ್ತರಿಸಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ತಾವೂರು, ಕೋರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ, ತಣ್ಣಿಮಾನಿ, ಚೆಟ್ಟಿಮಾನಿ ಗ್ರಾಮಗಳಲ್ಲಿ ಭತ್ತದ ಕೃಷಿ ಅಕ್ಷರಶಃ ನಲುಗಿ ಹೋಗಿದೆ. ಇದೀಗ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ರೈತರು ತಮ್ಮ ಭತ್ತದ ಗದ್ದೆಗಳತ್ತ ದೃಷ್ಟಿ ಹರಿಸಿ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಮಳೆಯ ಕೊರತೆಯಿಂದ ಗದ್ದೆ ಉಳುಮೆಗೆ ತಾಪತ್ರಯ ತಂದಿತ್ತ ಮಳೆ ಆಗಸ್ಟ್ ತಿಂಗಳಲ್ಲಿ ಒಂದೇ ವಾರದಲ್ಲಿ ಧಾರಾಕಾರವಾಗಿ ಸುರಿದು ರೈತರನ್ನು ಕಂಗೆಡಿಸಿದೆ. ಭಾಗಮಂಡಲದಿಂದ ಕಾವೇರಿ ನದಿ ತೀರದುದ್ದಕ್ಕೂ ಭತ್ತದ ಗದ್ದೆಗಳಲ್ಲಿ ಪ್ರವಾಹ ಆವರಿಸಿ ನಾಟಿ ಮಾಡಿದ್ದ ಭತ್ತದ ಪೈರನ್ನು ಕೊಳೆಯುವಂತೆ ಮಾಡಿದೆ. ನೀರಿನೊಂದಿಗೆ ಮರಳು ತುಂಬಿ ಅಪಾರ ಪ್ರಮಾಣದ ಭತ್ತದ ನಾಟಿ ಹಾಗೂ ಸಸಿಮಡಿ ಹಾಳಾಗಿದೆ. ಗದ್ದೆಯ ಬಯಲಿನಲ್ಲಿ ಹರಿಯುತ್ತಿದ್ದ ತೋಡುಗಳು ಉಕ್ಕಿ ಬದುಗಳು ಒಡೆದಿವೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅಳಿದುಳಿದ ಸಸಿಮಡಿಗಳನ್ನು ಬಳಸಿ ರೈತರು ಭತ್ತದ ನಾಟಿ ಕೆಲಸದಲ್ಲಿ ತೊಡಗಿದ್ದಾರೆ. ಸಸಿಮಡಿಗಳ ಕೊರತೆಯಿಂದ ಕೆಲವು ರೈತರು ಕೃಷಿಯನ್ನು ಕೈಬಿಟ್ಟಿದ್ದಾರೆ. ಗದ್ದೆಗಳಲ್ಲಿ ತುಂಬಿರುವ ಮರಳುಮಣ್ಣು ತೆಗೆಯಲು ಯಂತ್ರಗಳನ್ನು ತರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ಕಾಳುಮೆಣಸು ಕೃಷಿಗಿಂತಲೂ ರೈತರು ಭತ್ತದ ಕೃಷಿಗಾಗಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು ಅನ್ನದಾತರಿಗೆ ಹತ್ತು ಹಲವು ಸಂಕಷ್ಟಗಳು ಎದುರಾಗಿದೆ. - ಕೆ.ಡಿ. ಸುನಿಲ್