ಕುಶಾಲನಗರ, ಆ. 21: ತಾ. 9 ರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿದ ಸಂದರ್ಭ ಮನೆಗಳು ಜಲಾವೃತಗೊಳ್ಳುವದ ರೊಂದಿಗೆ ನದಿ ತಟದ ದೇವಾಲಯ, ಮಸೀದಿ, ಚರ್ಚ್, ಸ್ಮಶಾನಗಳು ನೀರಿನಲ್ಲಿ ಮುಳುಗಿದ್ದರೆ ಇನ್ನೊಂದೆಡೆ ಏಕಾಏಕಿ ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ತುಂಬಿ ಜನತೆ ಭಯಭೀತರಾಗು ವಂತಹ ಸ್ಥಿತಿ ಎದುರಾಗಿತ್ತು.
ರಾತ್ರಿ ವೇಳೆ ಮಡಿಕೇರಿ, ಕುಶಾಲನಗರ, ಮೈಸೂರು ವಾಹನ ಸಂಚಾರ ಸಂಪೂರ್ಣ ಸ್ತಬ್ಧ ಗೊಳ್ಳುವದರೊಂದಿಗೆ ಮನೆಯಲ್ಲಿ ನೆಲೆಸಿದ್ದ ನಾಗರಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪರ್ಯಾಯ ವ್ಯವಸ್ಥೆಗೆ ಪ್ರಯತ್ನಿಸು ತ್ತಿದ್ದುದು ಅಲ್ಲಲ್ಲಿ ಕಂಡುಬರುತ್ತಿತ್ತು.
ಮೈಸೂರು ಭಾಗದಿಂದ ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಿದ ಪ್ರಯಾಣಿಕರು ಕೊಪ್ಪ ಗ್ರಾಮದಲ್ಲಿ ಮಳೆಯಲ್ಲಿಯೇ ಉಳಿಯುವಂತಹ ಸ್ಥಿತಿ ಎದುರಾಯಿತು. ವಾಹನ ಸೌಲಭ್ಯವಿಲ್ಲದೆ ಗಡಿ ದಾಟುವ ಯಾವದೇ ಪ್ರಯತ್ನವೂ ಸಫಲವಾಗದೆ ರಾತ್ರಿಯಿಡೀ ಕಟ್ಟಡಗಳ ಹೊರ ಭಾಗದಲ್ಲಿ ಕಳೆದಿದ್ದು ನಿಜಕ್ಕೂ ಕನಸಿನಲ್ಲಿಯೂ ನೆನೆಸದಂತಹ ಅನುಭವ ಸೃಷ್ಟಿಯಾಗಿತ್ತು. ಇನ್ನೊಂದೆಡೆ ಮಳೆಯ ರಭಸ ಅಧಿಕ ವಾಗುವದರೊಂದಿಗೆ ನದಿಯಿಂದ ಕಿಲೋಮೀಟರ್ ತನಕ ನೂರಾರು ಮನೆಗಳು ಸಂಪೂರ್ಣ ತುಂಬುತ್ತಿ ದ್ದಂತೆಯೇ ಹಲವು ಕುಟುಂಬಗಳು ಕುಶಾಲನಗರದ ಕಡೆಗೆ ಧಾವಿಸಲು ಹರಸಾಹಸ ಪಡುವಂತಹ ಪರಿಸ್ಥಿತಿ ಎದುರಾಗಿತ್ತು. ಪ್ರಾಣ ಉಳಿದರೆ ಸಾಕು ಎಂಬಂತೆ ಎಲ್ಲವನ್ನು ಮನೆಯಲ್ಲಿಯೇ ಬಿಟ್ಟು ಬರಿಗೈಯಲ್ಲಿ ರಾತ್ರಿಯಿಡೀ ಪರದಾಡುತ್ತಿದ್ದ ದೃಶ್ಯ ನಿಜಕ್ಕೂ ನೋಡುಗರಿಗೆ ಮೈಜುಂ ಎನಿಸುವಂತಿತ್ತು.
ಮೈಸೂರು ಜಿಲ್ಲಾಡಳಿತದ ಅಧಿಕಾರಿ, ಸಿಬ್ಬಂದಿಗಳು ರಾತ್ರಿ ಯಾಗುತ್ತಿದ್ದಂತೆಯೇ ಸಂಪೂರ್ಣ ಅಸಹಾಯಕರಾಗಿ ಜನರ ಕೂಗನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಸಂದರ್ಭ ಸಹಾಯಕ್ಕೆ ಬಂದಿದ್ದು ಕುಶಾಲನಗರ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು.
ಗಡಿಭಾಗದಲ್ಲಿ ಸಂಕಷ್ಟದಲ್ಲಿರುವ ನಾಗರಿಕರ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕುಶಾಲನಗರದಿಂದ ಟ್ರ್ಯಾಕ್ಟರ್ ಮೂಲಕ ಸಂತ್ರಸ್ತರನ್ನು ಕುಶಾಲನಗರ ಕಡೆಗೆ ಒಯ್ಯಲು ಪ್ರಾರಂಭಿಸಿದರೂ ಅದು ಸಫಲವಾಗದೆ ನಂತರ ದುಬಾರೆ ಯಿಂದ ರ್ಯಾಫ್ಟರ್ಗಳನ್ನು ತರಿಸಿ ಹೆದ್ದಾರಿ ರಸ್ತೆ ಮೂಲಕ ಜನರನ್ನು ಸ್ಥಳಾಂತರಿಸಲು ಪ್ರಯತ್ನಿಸಿದರು. ನದಿ ನೀರಿನ ರಭಸಕ್ಕೆ ಹೆದ್ದಾರಿಯಲ್ಲಿ ಈ ಪ್ರಯತ್ನ ಕೂಡ ಕೈಗೂಡದೆ ನಂತರ ಕೊನೆಯ ಪ್ರಯತ್ನವಾಗಿ ಕುಶಾಲನಗರ ಕಡೆಯಿಂದ ಜೆಸಿಬಿ ಯಂತ್ರದ ಮೂಲಕ ಕೆಲವು ಸಂತ್ರಸ್ತರನ್ನು ಕುಶಾಲನಗರಕ್ಕೆ ಒಯ್ಯುವಲ್ಲಿ ಸಫಲರಾಗಿದ್ದು ನಿಜಕ್ಕೂ ಕುಶಾಲನಗರ ಪೊಲೀಸರ ಕಾಳಜಿ ಮಾತ್ರ ಸಂತ್ರಸ್ತರಿಗೆ ಅವಿಸ್ಮರಣೀಯವಾಗಿದೆ.
ಮೈಸೂರು ಹೆದ್ದಾರಿಯ ಕೊಪ್ಪ ವ್ಯಾಪ್ತಿಯ ಸುಮಾರು 1 ಕಿಮೀ ಅಂತರದಲ್ಲಿ ಸಂಪೂರ್ಣ ಜಲಾವೃತ ಗೊಂಡ ಹಿನೆÀ್ನಲೆಯಲ್ಲಿ ಇತ್ತ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸರು ಕಟ್ಟುನಿಟ್ಟಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸುವದರೊಂದಿಗೆ ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಯಾವದೇ ಅನಾಹುತಗಳು ಘಟಿಸದಿರಲು ಕಾರಣವಾಯಿತು.
ಇನ್ನೊಂದೆಡೆ ಕೆಲವು ಸ್ವಯಂ ಸೇವಕರು ಕೂಡ ಪ್ರಯಾಣಿಕರನ್ನು ಕುಶಾಲನಗರ ಗಡಿ ದಾಟಿಸುವಲ್ಲಿ ರಾತ್ರಿಯಿಡೀ ತಮ್ಮನ್ನು ತೊಡಗಿಸಿ ಕೊಂಡಿದ್ದು ಕಂಡುಬಂತು. ಹೊಲ ಗದ್ದೆಗಳು ನೀರಿನಿಂದ ಅವೃತಗೊಂಡ ಹಿನೆÀ್ನಲೆಯಲ್ಲಿ ಹಾವು, ಚೇಳು ಎಲ್ಲಿ ನೋಡಿದರಲ್ಲಿ ಓಡಾಡುತ್ತಿದ್ದ ದೃಶ್ಯ ಭಯಾನಕವಾಗಿತ್ತು.
ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಕೊಡಗು ಜಿಲ್ಲೆ ಕಡೆ ಪ್ರಯಾಣಿಸಲು ಸಂಕಷ್ಟದಲ್ಲಿದ್ದರೆ ಇತ್ತ ಕುಶಾಲನಗರದ ಯುವಕನೊಬ್ಬ ಬೆಂಗಳೂರಿನಲ್ಲಿ ಮೃತಪಟ್ಟು ಮೃತದೇಹ ಕೂಡ ರಾತ್ರಿ ಕೊಪ್ಪ ಗಡಿಭಾಗದಲ್ಲಿಯೇ ಉಳಿಯ ಬೇಕಾಯಿತು. ನಂತರ ಬೆಳಿಗ್ಗೆ ಪರ್ಯಾಯ ರಸ್ತೆ ಮೂಲಕ ಕುಶಾಲನಗರಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಬೇಕಾಯಿತು.
ಈ ನಡುವೆ ಹಲವು ವಾಹನಗಳು ನೀರಿನ ರಭಸಕ್ಕೆ ಸಿಲುಕಿ ರಸ್ತೆ ಬದಿಗೆ ಸರಿದು ಅದೃಷ್ಟವಶಾತ್ ಯಾವದೇ ಪ್ರಾಣಾಪಾಯ ಉಂಟಾಗದಿರುವದು ನಿಜಕ್ಕೂ ಅದೃಷ್ಟವೇ ಸರಿ. ತಾ. 10 ಮತ್ತು 11 ರಂದು ಹೆದ್ದಾರಿ ರಸ್ತೆಯಲ್ಲಿ ಹೊಲ ಗದ್ದೆಗಳಲ್ಲಿ ಈ ಸಂದರ್ಭ ಎಲ್ಲಿ ನೋಡಿದರೂ ರ್ಯಾಫ್ಟರ್ಗಳದ್ದೇ ದರ್ಬಾರು. ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಪ್ರಮುಖರು ತಮ್ಮ ರ್ಯಾಫ್ಟರ್ಗಳನ್ನು ಕುಶಾಲನಗರಕ್ಕೆ ಕಳುಹಿಸಿ ಮುಳುಗಿದ ಮನೆಯಿಂದ ವಸ್ತುಗಳನ್ನು ಸ್ಥಳಾಂತರಿಸುವಲ್ಲಿ ಸಹಕರಿಸಿದ್ದು ಒಂದೆಡೆಯಾದರೆ ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂತ್ರಸ್ತರನ್ನು ಸಾಗಿಸಲು ಸತತ ಎರಡು ದಿನಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.
ರಸ್ತೆ ಮೇಲೆ 3 ಅಡಿಗಳಷ್ಟು ನೀರು ಹರಿದು ಇನ್ನೂ ಅಧಿಕ ಅಪಾಯ ಉಂಟಾಗುವ ಸೂಚನೆ ಬೆನ್ನಲ್ಲೇ ಕುಶಾಲನಗರ ಹಾಗೂ ನೆರೆಯ ಕೊಪ್ಪ ಮತ್ತಿತರ ವ್ಯಾಪ್ತಿಯ ಸಾವಿರಕ್ಕೂ ಅಧಿಕ ಮನೆಗಳಿಂದ ಜನರು ಹೊರಬಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡ ಹಿನ್ನೆಲೆಯಲ್ಲಿ ಯಾವದೇ ಅನಾಹುತ ಘಟಿಸಿಲ್ಲ. ಇನ್ನೊಂದೆಡೆ ಕೊಡಗು ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ಥಳೀಯ ಆಡಳಿತದ ಅಧಿಕಾರಿ, ಸಿಬ್ಬಂದಿಗಳು ದಿನರಾತ್ರಿ ಎನ್ನದೆ ಜನರನ್ನು ಪಾರು ಮಾಡುವದರೊಂದಿಗೆ ಸಹಾಯಹಸ್ತ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕುಶಾಲನಗರ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಠಾಣಾಧಿಕಾರಿ ಜಗದೀಶ್ ಸೇರಿದಂತೆ ಸಿಬ್ಬಂದಿಗಳು ಮೂರು ದಿನಗಳ ಕಾಲ ಸತತವಾಗಿ ಜನರ ಸೇವೆಯಲ್ಲಿ ತೊಡಗಿ ಸಿಕೊಂಡಿದ್ದು ಎದ್ದು ಕಾಣುತ್ತಿತ್ತು. ಅತ್ತ ಬೈಲುಕೊಪ್ಪ ಠಾಣಾಧಿಕಾರಿ ಸವಿ ಮತ್ತು ಸಿಬ್ಬಂದಿಗಳು ತಮ್ಮ ಕೈಲಾದಷ್ಟು ಸಹಾಯಹಸ್ತ ನೀಡುವ ಮೂಲಕ ಯಾವದೇ ಅನಾಹುತಗಳು ಎದುರಾಗದಂತೆ ಎಚ್ಚರವಹಿಸಿದ್ದರು. ಕಂದಾಯ ಮತ್ತು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿ ಸಿಬ್ಬಂದಿಗಳು ಕೂಡ 3 ದಿನಗಳ ಕಾಲ ತಮ್ಮ ಕಚೇರಿ ಬಿಟ್ಟು ಓಡಾಟ ನಡೆಸುವ ಮೂಲಕ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಿದ್ದರು.
ಕುಶಾಲನಗರದ ವಿವಿಧ ದೇವಾಲಯಗಳು ಸಂಪೂರ್ಣ ನೀರಿನಿಂದ ಆವೃತಗೊಂಡ ಹಿನ್ನೆಲೆ ಕೆಲವು ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಕಳೆದ ಶುಕ್ರವಾರದಿಂದ ಸ್ಥಗಿತಗೊಂಡಿದೆ. ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಈ ನಡುವೆ ಕಾವೇರಿಯಲ್ಲಿ ನೀರಿನ ಹರಿವು ಯಥೇಚ್ಛ ಕ್ಷೀಣಗೊಂಡಿದೆ. ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ನಾಗರಿಕರು ತಮ್ಮ ಮನೆಗಳಿಗೆ ಹಿಂತಿರುಗುತ್ತಿರುವ ದೃಶ್ಯ ಗೋಚರಿಸಿದೆ.
- ಚಂದ್ರಮೋಹನ್