*ಗೋಣಿಕೊಪ್ಪಲು, ಆ. 21: ಆಶ್ಲೇಷ ಮಳೆಯ ಅಬ್ಬರಕ್ಕೆ ಗೋಣಿಕೊಪ್ಪಲು ಕೀರೆಹೊಳೆಯ ಪ್ರವಾಹ ಉಕ್ಕಿ ಪಟ್ಟಣ ನಿವಾಸಿಗಳ ಜೀವನ ಸಂಕಷ್ಟಕ್ಕೆ ಈಡಾಗಿತ್ತು.

ಇದೇ ಸಂದರ್ಭ ಕೀರೆ ಹೊಳೆಯ ಹರಿವಿನ ರಭಸದ ನೀರಿನೊಂದಿಗೆ ಕೀರೆ ಹೊಳೆಯ ಉದ್ದಕ್ಕೂ ಮರಳಿನ ರಾಶಿಯೇ ಹರಿದು ಬಂದು ಸಂಗ್ರಹಗೊಂಡಿದೆ. ಕೀರೆ ಹೊಳೆಯ ಎರಡು ಬದಿಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಮರಳು ಕಂಡುಬರುತ್ತಿದೆ.

ಇದೀಗ ಹೊಳೆಯ ಬದಿಯಲ್ಲಿ ಸಂಗ್ರಹಗೊಂಡ ಮರಳಿನ ಮೇಲೆ ಕೆಲವರ ಕಣ್ಣು ಬಿದ್ದು, ಕುಕ್ಕುತ್ತಿದೆ. ರಾತೋರಾತ್ರಿ ಕೀರೆಹೊಳೆಯಲ್ಲಿ ಸಂಗ್ರಹಗೊಂಡ ಮರಳನ್ನು ದೋಚು ತ್ತಿದ್ದಾರೆ. ಸಿಮೆಂಟ್ ಚೀಲಗಳಲ್ಲಿ ಮರÀಳನ್ನು ತುಂಬಿ ವಾಹನಗಳಲ್ಲಿ ಸಾಗಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ನದಿಗಳಲ್ಲಿ ಮರಳು ತೆಗೆಯುವದನ್ನು ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮರಳಿಗೆ ಹೆಚ್ಚಿನ ಬೇಡಿಕೆ ಇದೆ. ಹೆಚ್ಚಿನ ಬೆಲೆಗೆ ಮರಳು ವ್ಯಾಪಾರ ನಡೆಯುತ್ತಿದೆ. ಸ್ಥಳೀಯ ಹುಣಸೂರು, ಪಿರಿಯಾಪಟ್ಟಣ ಭಾಗಗಳಿಂದ ಎಂ. ಸ್ಯಾಂಡ್ ತಂದು ಮನೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ಇದೀಗ ಕೀರೆ ಹೊಳೆಯ ನೀರಿನ ಹರಿವಿನ ರಭಸಕ್ಕೆ ಕೊಚ್ಚಿ ಬಂದಿರುವ ಮರÀಳನ್ನು ಕಂಡಾಗ ಕೆಲವರಿಗೆ ಮರಳು ಪಡೆಯುವ ಆಸೆ ಹುಟ್ಟಿಸಿದೆ. ಹೀಗಾಗಿ ಬೆಳಗಿನ ಜಾವ, ರಾತ್ರಿ ಹೊತ್ತಿನಲ್ಲಿ ಸಂಗ್ರಹಗೊಂಡ ಮರಳನ್ನು ಚೀಲಗಳಲ್ಲಿ ಹಾಗೂ ವಾಹನಗಳಲ್ಲಿ ತುಂಬಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವದು ಕಂಡುಬರುತ್ತಿದೆ.

- ಎನ್.ಎನ್. ದಿನೇಶ್