ನಾಪೋಕ್ಲು, ಆ. 21: ಕಾವೇರಿ ಪ್ರವಾಹದಿಂದ ಕಂಗೆಟ್ಟಿದ್ದ ನಾಪೋಕ್ಲು ನಿವಾಸಿಗಳಿಗೆ ಇದೀಗ ಮತ್ತೊಂದು ಸಂಕಷ್ಟ ತಲೆದೋರಿದೆ. ನಾಪೋಕ್ಲು ಸಂತೆಮಾಳದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸುರಿದಿರುವ ಕಸದ ರಾಶಿಯಿಂದ ಸ್ಥಳೀಯರು ಮೂಗು ಮುಚ್ಚಿ ಕೊಂಡು ತಿರುಗಾಡು ವಂತಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.

ನಾಪೋಕ್ಲು ಗ್ರಾಮ ಪಂಚಾಯಿತಿ ಪಟ್ಟಣದಲ್ಲಿ ಸಂಗ್ರಹವಾದ ಕಸವನ್ನೆಲ್ಲಾ ತಂದು ಸಂತೆ ಮಾರುಕಟ್ಟೆಯಲ್ಲಿ ಸುರಿದಿರುವದರಿಂದ ಸೋಮವಾರ ಸಂತೆಗೆ ಆಗಮಿಸಿದ್ದ ವರ್ತಕರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ನೀರು ತುಂಬಿ ಸಂಪೂರ್ಣ ಕೆಸರುಮಯ ವಾಗಿರುವ ಸಂತೆ ಮಾರುಕಟ್ಟೆಯಲ್ಲಿ ಕಷ್ಟಪಟ್ಟು ತಿರುಗಾಡುವದರ ಜೊತೆಗೆ ಕಸದ ದುರ್ನಾತದಿಂದ ವರ್ತಕರು, ಗ್ರಾಹಕರು ಇನ್ನು ಕೆಲವರು ದುರ್ಗಂಧ ಬೀರುತ್ತಿದ್ದ ಸಂತೆಕಡೆ ಮುಖಮಾಡುತ್ತಿಲ್ಲ.

ಗ್ರಾಮ ಪಂಚಾಯಿತಿ ಸಂತೆ ಮಾರುಕಟ್ಟೆಯಲ್ಲಿ ಪಟ್ಟಣದ ತ್ಯಾಜ್ಯವನ್ನು ತಂದು ಸುರಿದಿರುವದ ರಿಂದ ಪರಿಸರ ಮಾಲಿನ್ಯದೊಂದಿಗೆ ರೋಗರುಜಿನ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ. ಬಿ.ಎ. ಅಬ್ದುಲ್ ನಾಸೀರ್, ಸ್ಥಳೀಯರಾದ ಪ್ರಭು ಅಚ್ಚಪ್ಪ, ಕಲಿಯಂಡ ಸಾಬು ಅಯ್ಯಣ್ಣ, ಚೆರಿಯಪರಂಬು ಉಸ್ಮಾನ್, ವರ್ತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಚೇರಂಬಾಣೆ ಗ್ರಾಮ ಪಂಚಾಯಿತಿಯಿಂದ ತಾನು ನಾಪೋಕ್ಲು ಗ್ರಾಮ ಪಂಚಾಯಿತಿಗೆ ನಿಯೋಜಿತಗೊಂಡಿದ್ದು, ಪ್ರವಾಹ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಪರಿಹಾರ ಕೇಂದ್ರದಲ್ಲಿ ಕಳೆದ ವಾರದ ವರೆಗೆ ಕಾರ್ಯನಿರ್ವಹಿಸಿದ್ದು, ಸಂತೆಮಾಳದಲ್ಲಿ ಕಸ ಸುರಿದಿರುವ ಬಗ್ಗೆ ಗಮನಹರಿಸುವದಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಇಸ್ಮಾಯಿಲ್ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಸ್ಥಳಕ್ಕೆ ತೆರಳುವ ರಸ್ತೆಯು ಪ್ರವಾಹದಿಂದ ಆವೃತ್ತವಾಗಿದ್ದರಿಂದ ಸ್ಥಳಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆ ಸಂತೆ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಕಸವನ್ನು ಸುರಿದಿದ್ದು, ರಸ್ತೆ ಸಂಚಾರ ಸುಗಮಗೊಂಡ ಬಳಿಕ ಸಂತೆ ಮಾರುಕಟ್ಟೆಯಲ್ಲಿ ಸುರಿದಿರುವ ತ್ಯಾಜ್ಯವನ್ನು ತೆರವುಗೊಳಿಸ ಲಾಗುವದೆಂದು ಹೇಳಿದ್ದಾರೆ.

-ದುಗ್ಗಳ ಸದಾನಂದ