ಕುಶಾಲನಗರ, ಆ. 21: ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ತಟದ ಕೆಲವು ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು ಈ ಮನೆಗಳಲ್ಲಿ ವಾಸವಾಗಿದ್ದ ಬಾಡಿಗೆದಾರರ ಕುಟುಂಬ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಪಟ್ಟಣದ ವಿವಿಧ ಬಡಾವಣೆಗಳ ಅಂದಾಜು 700 ಮನೆಗಳಿಗೆ ನೀರು ನುಗ್ಗಿದ್ದು 15 ಕ್ಕೂ ಅಧಿಕ ಮನೆಗಳು ಸಂಪೂರ್ಣ ಕುಸಿದು ಬಿದ್ದಿರುವ ದೃಶ್ಯ ಕಾಣಬಹುದು. ಕೆಲವು ಮನೆಗಳು ಅಲ್ಪಸ್ವಲ್ಪ ಹಾನಿಯಾಗು ವದರೊಂದಿಗೆ ಗೋಡೆಗಳು ಬಿರುಕು ಬಿಟ್ಟಿವೆ.

ಇಂತಹ ಕಟ್ಟಡಗಳಲ್ಲಿ ಬಹುತೇಕ ಬಾಡಿಗೆದಾರರು ವಾಸವಾಗಿದ್ದು ತಮ್ಮ ಸಾಮಾನು ಸರಂಜಾಮುಗಳು ಹಾನಿಯಾಗುವದರೊಂದಿಗೆ ಸೂರು ಕಳೆದುಕೊಂಡು ಪರರ ಮನೆಯಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ಒದಗಿದೆ.

ಕುಶಾಲನಗರ ದಂಡಿನಪೇಟೆ ಯಲ್ಲಿ 7 ಮನೆಗಳು ಬಿದ್ದಿದ್ದು ಅಬ್ದುಲ್ ರೆಹಮಾನ್ ಎಂಬವರು 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇದೀಗ ಮನೆ ಕುಸಿದು ಬಿದ್ದಿದೆ.

ಪರಿಹಾರವಾಗಿ ಇವರಿಗೆ ಕೇವಲ 10 ಸಾವಿರ ಮಾತ್ರ ಲಭಿಸಿರುವದಾಗಿ ಹೇಳಿರುವ ಅಬ್ದುಲ್ ರೆಹಮಾನ್, ತಮ್ಮ ಕುಟುಂಬ ಬೀದಿ ಪಾಲಾಗಿದೆ ಎಂದು ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಉಳಿದಂತೆ ಮನೆ ಮಾಲೀಕರಿಗೆ ಪರಿಹಾರ ಧನ ದೊರೆಯುವದರ ದಿಂದ ಬಾಡಿಗೆದಾರರು ಸಂಕಷ್ಟಕ್ಕೆ ಒಳಗಾಗಿರುವದು ಕಾಣಬಹುದು.

ಕಳೆದ 4 ವರ್ಷಗಳಿಂದ ರಸ್ತೆ ಬದಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿರುವ ದಿಲ್ನಾಸ್ ಅವರ ಸ್ಥಿತಿಯೂ ಇದೇ ರೀತಿ ಆಗಿದೆ. ಸ್ವಂತ ಮನೆಗಳು ಕುಸಿದು ಬಿದ್ದ ಮಾಲೀಕರು ಕೂಡ ಕೆಲವರು ತಮ್ಮ ಏಕೈಕ ಮನೆ ತೊರೆದು ನೆಂಟರಿಷ್ಟರ ಮನೆಯಲ್ಲಿ ಉಳಿದುಕೊಂಡಿದ್ದರೆ ಕೆಲವರು ದಂಡಿನಪೇಟೆಯ ಮಸೀದಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇದೇ ಸ್ಥಿತಿ ಕುಶಾಲನಗರದ ಇಂದಿರಾ ಬಡಾವಣೆ, ಬಸಪ್ಪ ಬಡಾವಣೆ, ಕುವೆಂಪು, ಸಾಯಿ ಬಡಾವಣೆ ನಿವಾಸಿಗಳು ಎದುರಿಸುತ್ತಿರುವದು ಕಾಣಬಹುದು.

- ಚಂದ್ರಮೋಹನ್