ಗೋಣಿಕೊಪ್ಪಲು, ಆ. 21: ಇಲ್ಲಿಗೆ ಸಮೀಪ ಕಿರುಗೂರು ಗ್ರಾಮದ ಹೊನ್ನಿಕೊಪ್ಪ ಕಾಲೋನಿಯ ಸುಮಾರು 38 ಮಂದಿ ನಿರಾಶ್ರಿತರು ಅಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ವೀರಾಜಪೇಟೆ ಜೆಎಂಎಫ್ಸಿ ಮತ್ತು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಅವರು ಇತ್ತೀಚೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಗ್ರಾ.ಪಂ. ಅಧ್ಯಕ್ಷೆ ಬೋಜಿ, ಉಪಾಧ್ಯಕ್ಷ ಎಚ್.ಪಿ. ಪ್ರಕಾಶ್, ಸದಸ್ಯರಾದ ಮಂಜುನಾಥ್, ಸುಧೀರ್, ಪಿ.ಕೆ. ಗಿರೀಶ್, ರೀಟಾ ಪೂಣಚ್ಚ, ವಿಶ್ವನಾಥ್, ನೋಡೆಲ್ ಅಧಿಕಾರಿ ರಾಜಮ್ಮ, ಪಿಡಿಓ, ಎನ್ಎಸ್ಎಸ್ ಸ್ವಯಂ ಸೇವಕರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಉಪಸ್ಥಿತರಿದ್ದರು. ಕೀರೆ ಹೊಳೆ ಪ್ರವಾಹದಿಂದಾಗಿ ತಾ. 9 ರಿಂದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನುದ್ದೇಶಿಸಿ ಯಾವದೇ ಹೊಳೆ ದಡದಲ್ಲಿ ಮನೆ ನಿರ್ಮಿಸಿ ವಾಸಿಸುವದು ಅಪಾಯಕಾರಿ. ಸರಕಾರದ ನೆರವಿನೊಂದಿಗೆ ಮುಂದೆ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಸಲಹೆ ನೀಡಿದರು.
- ಟಿ.ಎಲ್.ಎಸ್.