ಗೋಣಿಕೊಪ್ಪ ವರದಿ. ಆ. 22: ದಕ್ಷಿಣ ಕೊಡಗಿನ ಹಲವು ಜಾಗಗಳಲ್ಲಿ ನೆಲೆಸಿರುವ ಮೂಲಭೂತ ವಂಚಿತ ಪರಿಶಿಷ್ಟ ಪಂಗಡದವರಿಗೆ ಅಗತ್ಯ ಸೌಕರ್ಯ ನೀಡಲು ಜಿಲ್ಲಾಡಳಿತಕ್ಕೆ ಸೆಪ್ಟೆಂಬರ್ 5 ವರೆಗೆ ಗಡುವು ನೀಡಲಾಗುತ್ತಿದ್ದು, ಸ್ಪಂದಿಸದಿದ್ದಲ್ಲಿ ಐಟಿಡಿಪಿ ಇಲಾಖೆ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲಾ ಗುವದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಎಚ್ಚರಿಸಿದ್ದಾರೆ.

ಗೋಣಿಕೊಪ್ಪ, ಟಿ. ಶೆಟ್ಟಿಗೇರಿ ಮತ್ತು ಹೈಸೊಡ್ಲೂರು ವ್ಯಾಪ್ತಿಯಲ್ಲಿ ಸಾಕಷ್ಟು ಪರಿಶಿಷ್ಟ ಪಂಗಡದವರು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಸೂಕ್ತ ಸೌಕರ್ಯ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೈಸೊಡ್ಲೂರು ವ್ಯಾಪ್ತಿಯಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸುವ ಸಂದರ್ಭ ಸಮೀಪದಲ್ಲಿಯೇ ಗುಡಿಸಲು ಕಟ್ಟಿಕೊಂಡು ಬದುಕುತ್ತಿರುವ ನಿವಾಸಿಗಳ ಬಗ್ಗೆ ವಿಚಾರಿಸಲಿಲ್ಲ. ಸಾಕಷ್ಟು ಬಾರಿ ಇಲ್ಲಿನ ನಿವಾಸಿಗಳಿಗೆ ಸೌಕರ್ಯ ಕಲ್ಪಿಸಲು ಅರ್ಜಿ ಸಲ್ಲಿಸಿದ್ದರೂ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಸೆಪ್ಟೆಂಬರ್ 5 ರ ಒಳಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ತಪ್ಪಿದಲ್ಲಿ ಆಹೋರಾತ್ರಿ ಧರಣಿ ನಡೆಸುವದಾಗಿ ಎಚ್ಚರಿಸಿದರು.

ಜಿಲ್ಲಾ ಸಂಚಾಲಕ ಎಚ್. ಆರ್. ಪರಶುರಾಮ್ ಮಾತನಾಡಿ, ಹೈಸೊಡ್ಲೂರು ವ್ಯಾಪ್ತಿಯಲ್ಲಿ 74 ಕುಟುಂಬಗಳಿವೆ. ಪ್ರವಾಹ ಸಂದರ್ಭ ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಇವರ ಬಗ್ಗೆ ಅನುಕಂಪ ತೋರಿಸಲಿಲ್ಲ. ಅವರಿಗೆ ಮೂಲಭೂತ ಸೌಲಭ್ಯ ನೀಡುವದು, ಬದಲಿ ನಿವೇಶನ ಕಲ್ಪಿಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಇವರನ್ನು ಕಡೆಗಣಿಸಿರುವದು ಸರಿಯಲ್ಲ ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಆರ್. ಚಂದ್ರ, ಸಂಘಟನಾ ಸಂಚಾಲಕ ಕರ್ಕು, ಸದಸ್ಯೆ ಮಂಜು ಉಪಸ್ಥಿತರಿದ್ದರು.