ಶ್ರೀಮಂಗಲ, ಆ. 22: ತಾ. 2 ರಿಂದ 11 ರವರೆಗೆ 70 ರಿಂದ 100 ಇಂಚು ಮಳೆ ಸುರಿಯುವ ಮೂಲಕ ಕಾಫಿ, ಕರಿಮೆಣಸು, ಅಡಿಕೆ, ಭತ್ತದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಇದನ್ನೇ ನಂಬಿದ ಬೆಳೆಗಾರರ ಬದುಕು ಅಂಧಕಾರದಲ್ಲಿ ಮುಳುಗಿದೆ. ಬೆಳೆಗಾರರಿಗೆ ಸೂಕ್ತ ನೆರವು ನೀಡ ಬೇಕೆಂದು ಕುತ್ತ್ನಾಡ್- ಬೇರಳಿನಾಡ್ ಬೆಳೆಗಾರರ ಸಂಘದ ಅಧ್ಯಕ್ಷ ತೀತಿಮಾಡ ಲಾಲಾ ಭೀಮಯ್ಯ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿ.ಶೆಟ್ಟಿಗೇರಿಯಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಮಹಾಮಳೆಗೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಭೂಕುಸಿತ, ಪ್ರವಾಹ ಮತ್ತು ನಿರಂತರ ಮಳೆಯಿಂದ ಜಿಲ್ಲೆಯ ಬೆಳೆಗಾರರ ಮೇಲೆ ನೇರ ದುಷ್ಪರಿಣಾಮ ಬೀರಿದೆ. ವಿಶೇಷವಾಗಿ ಬಿ-ಶೆಟ್ಟಿಗೇರಿ ಮತ್ತು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೆ 170 ಇಂಚು ಮಳೆ ಯಾಗಿದ್ದು, ಶೇ. 70 ರಷ್ಟು ಕಾಫಿ ಫಸಲು ನಾಶವಾಗಿದೆ ಎಂದು ವಿವರಿ ಸಿದರು. ಸಂಘದ ಕಾರ್ಯದರ್ಶಿ ಅಮ್ಮಣಿಚಂಡ ರಂಜು ಪೂಣಚ್ಚ ಮಾತನಾಡಿ, ನೊಂದ ಬೆಳೆಗಾರರು ಕಾಫಿಗೆ ಬೆಲೆ ಇಲ್ಲದೆ ಕಂಗಾಲಾಗಿರುವ ಬೆಳೆಗಾರರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣ ವಾಗಿದೆ. ಸರ್ಕಾರ ಇದನ್ನು ಗಂಭೀರ ವಾಗಿ ಪರಿಗಣಿಸಿ ಎಕರೆಗೆ ಕನಿಷ್ಟ 25 ಸಾವಿರ ಪರಿಹಾರ ಕೊಡಬೇಕು. ಕಳೆದ ಸಾಲಿನಲ್ಲಿ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಘೋಷಿಸಿದ್ದು, ಅಂದಾಜು ಶೇ. 10 ರಷ್ಟು ರೈತರಿಗೆ ಮಾತ್ರ ಇದುವರೆಗೆ ಈ ಸೌಲಭ್ಯ ದೊರೆತಿದ್ದು, ಉಳಿದ ರೈತರ ಖಾತೆಗೆ ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
ಸಂಘದ ಸಂಚಾಲಕ ಮದ್ರೀರ ಗಿರೀಶ್ ಅವರು ಮಾತನಾಡಿ, ಸರ್ಕಾರದ ವತಿಯಿಂದ ಸಬ್ಸಿಡಿ ರೂಪದಲ್ಲಿ ಕೆರೆಗಳನ್ನು ನಿರ್ಮಿಸ ಲಾಗಿದ್ದು, ಮಹಾಮಳೆಯಿಂದ ಭೂ ಕುಸಿತ, ಪ್ರವಾಹಕ್ಕೆ ತುತ್ತಾಗಿ ಶೇಕಡ 90 ರಷ್ಟು ಕೆರೆಗಳಿಗೆ ಹಾನಿಯಾಗಿದೆ. ಸದರಿ ಕೆರೆಗಳನ್ನು ಸರ್ಕಾರದ ವತಿಯಿಂದ ಪುರ್ನನಿರ್ಮಾಣ ಮಾಡಬೇಕಿದೆ. ಹಲವು ವರ್ಷಗಳಿಂದ ಕಾಫಿ ಮಂಡಳಿ ಹಾಗೂ ಜಿಲ್ಲಾಡಳಿತ ಕಾಟಾಚಾರಕ್ಕೆ ಫಸಲು ನಾಶದ ಪರಿಶೀಲನೆ ನಡೆಸುತ್ತಿದ್ದು, ಕಳೆದ ದಶಕದಿಂದ ನಿರಂತರ ನಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದರೂ ಇವರುಗಳ ವರದಿ ಪರಿಗಣಿಸಿ ಯಾವದೇ ನೆರವು ನೀಡದಿರುವದು, ಕಾಫಿ ಬೆಳೆಗಾರರ ಸಂಕಷ್ಟವನ್ನು ಗುರು ತಿಸಲು ವಿಫಲವಾಗಿದೆ ಎಂಬದನ್ನು ತೋರಿಸುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಸೂಕ್ತ ನೆರವು ನೀಡದಿದ್ದರೆ ಕೊಡಗಿನ ಬೆಳೆಗಾರರು ಮತ್ತು ಕೂಲಿ ಕಾರ್ಮಿಕರು ಬೀದಿ ಪಾಲಾಗುವದರಲ್ಲಿ ಸಂದೇಹವಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಕೊಡಗಿನ ಸ್ವಾಭಿಮಾನಿ ಜನತೆ ಎಚ್ಚೆತ್ತು ರಾಜಕೀಯ ರಹಿತವಾಗಿ ಹೋರಾಟ ಕ್ಕಿಳಿಯುವದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಎಲ್ಲಾ ಸಂಘ ಸಂಸ್ಥೆಗಳು ರಾಜಕೀಯ ರಹಿತವಾಗಿ ಕೊಡಗಿನ ಜನರನ್ನು ಸಂಘಟಿಸ ಬೇಕಾಗಿದೆ. ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಕರೆದು ನಿರ್ಣಯವನ್ನು ಮಾಡಿ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಂಘದ ಸದಸ್ಯರುಗಳಾದ ಕಡೇಮಾಡ ಅಶೋಕ್ ಚಿಟ್ಟಿಯಪ್ಪ, ನಾಮೇರ ದಾದ, ಕಡೇಮಾಡ ರಿಜು, ಕಾಳೇಂಗಡ ಮಧು ಮಂದಣ್ಣ, ಕಡೇಮಾಡ ಸತೀಶ್ ಅವರು ಮಾತನಾಡಿದರು.