ಸೋಮವಾರಪೇಟೆ, ಆ. 21: ತಾಲೂಕು ಹಿಂದೂ ಮಲಯಾಳ ಸಮಾಜದ ವಾರ್ಷಿಕ ಮಹಾಸಭೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿನ ಸಮಾಜದ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವದರೊಂದಿಗೆ ಸಮಾಜದ ಆಸ್ತಿಯನ್ನಾಗಿಸಲು ಪೋಷಕರು ಮುಂದಾಗಬೇಕೆಂದು ಕರೆ ನೀಡಿದರು. ಸಮಾಜ ಬಂಧುಗಳು ಸಂಘಟನೆಯೊಂದಿಗೆ ಕೈಜೋಡಿಸಿದರೆ ಸಮಸ್ಯೆಗಳು ಎದುರಾದಾಗ ಸಂಘಟನೆ ಸಹಾಯ ಮಾಡಲಿದೆ ಎಂದರು.
ಸಮಾಜ ಬಾಂಧವರ ಮನೆಗಳಲ್ಲಿ ಸಾವು, ನೋವುಗಳಾದಾಗ ಸಂಘ ಸ್ಪಂದಿಸುತ್ತಾ ಬಂದಿದೆ. ಕಳೆದ ಸಾಲಿನಲ್ಲಿ ಸುಮಾರು 24 ಮಂದಿ ನಿಧನರಾಗಿದ್ದು, ಅವರುಗಳ ಮನೆಗೆ ತೆರಳಿ ನೊಂದವರಿಗೆ ಸಾಂತ್ವನ ಹೇಳುವದರೊಂದಿಗೆ ಮಡಿದವರ ಕುಟುಂಬಕ್ಕೆ ತಲಾ ರೂ. 2 ಸಾವಿರ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಸಲಹೆಗಾರ ಟಿ.ಕೆ. ಸಾಯಿಕುಮಾರ್, ಸಂಘಟನೆಯನ್ನು ಸದೃಢವಾಗಿ ಕಟ್ಟಿ ಬೆಳೆಸಿದರೆ ಮುಂದೆ ಅದರಿಂದ ಲಾಭ ಪಡೆಯಬಹುದು. ಸಮಾಜಕ್ಕೆ ಅನ್ಯಾಯವಾದಲ್ಲಿ ಸಂಘಟನಾತ್ಮಕವಾಗಿ ಹೋರಾಟ ಮಾಡುವ ಮೂಲಕ ನ್ಯಾಯ ದಕ್ಕಿಸಿಕೊಳ್ಳಲು ಸಾಧ್ಯ. ಸಂಘ ಮಾಡುವ ಎಲ್ಲಾ ಕಾರ್ಯಗಳಲ್ಲೂ ಸದಸ್ಯರುಗಳ ಸಹಕಾರವಿರಲಿ ಎಂದರು. ವೇದಿಕೆಯಲ್ಲಿ ಸಂಘದ ಸಲಹೆಗಾರರಾದ ಉದಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಉಪಸ್ಥಿತರಿದ್ದರು.