ಮಡಿಕೇರಿ, ಆ. 22: ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದ ಆಗುತ್ತಿರುವ ತೊಂದರೆ, ಭೂಕುಸಿತ ಸೇರಿದಂತೆ ಒಟ್ಟು ಪ್ರಾಕೃತಿಕ ದುರಂತದ ಕುರಿತು ಸಮಗ್ರ ಅಧ್ಯಯನ ಆಗಬೇಕಿದೆ ಎಂದು ರಾಜ್ಯ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕುರಿತು ‘ಶಕ್ತಿ’ ಸಚಿವರ ಗಮನ ಸೆಳೆದು, ಪ್ರತಿಯೊಬ್ಬರೂ ಅವರವರ ಅಭಿಪ್ರಾಯಗಳನ್ನು ನೀಡುತ್ತಿರುವದರಿಂದ ಜಿಲ್ಲೆಯ ಜನತೆಯಲ್ಲಿ ಗೊಂದಲ ಉಂಟಾಗಿದೆ. ಮುಂದಿನ ವರ್ಷಗಳ ಬಗ್ಗೆಯೂ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿವರಿಸಿದಾಗ ಸಚಿವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಸ್ಥಿತಿಗತಿಯ ಬಗ್ಗೆ ಸಮಗ್ರ ಅಧ್ಯಯನವಾಗಬೇಕು, ಈಗಿನ ಪರಿಸ್ಥಿತಿ ಪ್ರತಿ ವರ್ಷ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಅಧ್ಯಯನ ಮತ್ತು ಸರ್ಕಾರಕ್ಕೆ ಸಲ್ಲಿಸುವ ವರದಿ ನಿಷ್ಪಕ್ಷಪಾತವಾಗಿರಬೇಕು ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಹಿಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ‘‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’’ ರಚಿಸಿದ್ದರೂ, ಅದು ಯಾವದೇ ರೀತಿಯ ನಿರ್ವಹಣೆ ಇಲ್ಲದಿರುವ ಬಗ್ಗೆ ‘ಶಕ್ತಿ’ ಸಚಿವರಿಗೆ ಮನವರಿಕೆ ಮಾಡಿತು. ಪ್ರಾಧಿಕಾರಕ್ಕೆ ಜಿಲ್ಲೆಯಲ್ಲಿ ಒಬ್ಬ ಸೂಕ್ತ ವ್ಯಕ್ತಿಯ ನಿಯೋಜನೆ, ಸರ್ಕಾರದಲ್ಲಿರುವ 100 ಕೋಟಿಯನ್ನು ಪ್ರಾಧಿಕಾರಕ್ಕೆ ವರ್ಗಾವಣೆ, ಈಗಿನ ಮುಖ್ಯಮಂತ್ರಿಗಳು ಭರವಸೆ ನೀಡಿರುವ 500 ಕೋಟಿ ರೂಪಾಯಿ ಅನುದಾನದ ಬಿಡುಗಡೆ, ಜಿಲ್ಲೆಯಲ್ಲಿ ನಿರ್ಮಿಸಬೇಕಾದ ಮನೆಗಳು, ರಸ್ತೆ, ಸೇತುವೆಗಳು, ಕೊಚ್ಚಿ ಹೋದ ಜಾಗಗಳ ಸರ್ವೆ, ನದಿ ತಟದ ಜನರ ಸ್ಥಳಾಂತರದ ಬಳಿಕ ಅವರಿಗೆ ಮಾಡಬೇಕಾದ ವ್ಯವಸ್ಥೆ ಹಾಗೂ ಸಂಬಂಧಿತ ಕೆಲಸಗಳನ್ನು ಪ್ರಾಧಿಕಾರ ನೋಡಿಕೊಳ್ಳುವಂತಾಗಬೇಕು ಎಂದು ‘ಶಕ್ತಿ’ ಸಲಹೆ ನೀಡಿತು.

ಈ ಬಗ್ಗೆ ಗಂಭೀರವಾಗಿ ಕಾರ್ಯೋನ್ಮುಖನಾಗುತ್ತೇನೆಂದ ಸಚಿವರು, ಜಿಲ್ಲೆಯ ಶಾಸಕರುಗಳೊಂದಿಗೆ ಚರ್ಚಿಸುವದಾಗಿ ತಿಳಿಸಿದರು. ಪ್ರಾಧಿಕಾರ ರಚನೆ ವಿಧಾನಸಭೆಯಲ್ಲಿ ಮಸೂದೆ ಮೂಲಕ ಆಗಬೇಕಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವದಾಗಿ ಹೇಳಿದರು.

ಜಿಲ್ಲೆಯ ನದಿ ತಟಗಳಲ್ಲಿ ಅನಧಿಕೃತವಾಗಿಯೂ ವಾಸ್ತವ್ಯ ಹೂಡಿರುವ ಕುಟುಂಬಗಳಿಗೂ ಮಾನವೀಯ ನೆಲೆಯಲ್ಲಿ ಬೇರೆಡೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದು, ಪ್ರತ್ಯೇಕ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು. ಅಗತ್ಯ ಬಿದ್ದಲ್ಲಿ ಜಾಗ ಖರೀದಿಗೂ ಸರ್ಕಾರ ಸಿದ್ಧವಿದೆ ಎಂದರು.

ಮಾಕುಟ್ಟ ರಸ್ತೆಗೆ ಪರ್ಯಾಯವಾಗಿ ಅರಣ್ಯ ಜಾಗದಲ್ಲಿ ರಸ್ತೆ ನಿರ್ಮಿಸುವ ಬಗ್ಗೆ ಶಾಸಕ ಬೋಪಯ್ಯ ಅವರು ಸಲಹೆ ನೀಡಿದ್ದನ್ನು ಒಪ್ಪಿ ಈ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.

ವೀರಾಜಪೇಟೆ ಅಯ್ಯಪ್ಪ ಬೆಟ್ಟ ಹಾಗೂ ನೆಹರೂ ನಗರ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದನ್ನು ಪರಿಶೀಲಿಸಿದ್ದು, ಸುಮಾರು 700 ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪಿವೆ ಎಂದರು.

ಜಿಲ್ಲೆಯ ಈಗಿನ ಸಂತ್ರಸ್ತರ ಸ್ಥಿತಿ ಬಗ್ಗೆ ತೀರಾ ನೊಂದಿರುವದಾಗಿ ಹೇಳಿದ ಸುರೇಶ್ ಕುಮಾರ್, ಸರ್ಕಾರ ಇಲ್ಲಿನ ಭಾವನೆ, ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಅರಿತು ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.