ವೀರಾಜಪೇಟೆ, ಆ. 22: ಭಾರೀ ಭೂ ಕುಸಿತ ಸಂಭವಿಸಿದ್ದ ತೋರ ಗ್ರಾಮದಲ್ಲಿ ಸಾವಿಗೀಡಾದ ಆರನೇ ಶವ ಇಂದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಾಕೃತಿಕ ದುರಂತದಿಂದ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿದೆ. ತೋರದಲ್ಲಿ ನಾಪತ್ತೆಯಾದ ಇನ್ನೂ ನಾಲ್ವರ ಶೋಧನಾ ಕಾರ್ಯ ಮುಂದುವರೆದಿದೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಕೊರ್ತಿಕಾಡು ಎಂಬಲ್ಲಿ ಸಂಭವಿಸಿದ ಘನ ಘೋರ ದುರಂತದಲ್ಲಿ ಕಾಣೆಯಾಗಿದ್ದ ದಿ. ಅಪ್ಪು ಅವರ ಪತ್ನಿ ಲೀಲಾ (60) ಅವರ ಮೃತ ದೇಹವು ಚಿದ್ರಗೊಂಡ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಮೃತರು ಕೀತಿಯಂಡ ಮಂದಪ್ಪ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ಈ ವೃದ್ಧ ದಂಪತಿಗಳಿಗೆ ಮಕ್ಕಳಿರಲಿಲ್ಲ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಸುಮಾರು 12 ಗಂಟೆಯ ವೇಳೆಗೆ 30 ಅಡಿ ಆಳದಲ್ಲಿ ಮೃತರ ಬಟ್ಟೆ ಕಾಣಿಸಿಕೊಂಡಿದ್ದು, ನಿಧಾನವಾಗಿ ಮಣ್ಣು ಸರಿಸಿದಾಗ ಮೃತ ಶರೀರ ಗೋಚರಿಸಿದೆ. ಕುಟಂಬದ ಸದಸ್ಯರು ಮೃತ ವ್ಯಕ್ತಿಯನ್ನು ಲೀಲಾ ಎಂದು ಗುರುತಿಸಿದ್ದಾರೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾದ ಹೇಮಪ್ರಿಯ ಅವರು ಶವಪರೀಕ್ಷೆ ಮಾಡಿದ ನಂತರ ಕುಟುಂಬದ ಸದಸ್ಯರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು. ಮೀನುಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಶವಗಾರಕ್ಕೆ ಆಗಮಿಸಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಲೀಲಾ ಅವರ ತಮ್ಮ ಕೆ.ಬಿ.ಶಿವದಾಸ್ ಅವರಿಗೆ ಅಂತ್ಯ ಸಂಸ್ಕಾರದ ಪರಿಹಾರದ ಚೆಕ್ ನೀಡಿದರು. ಈ ಸಂದಭರ್À ತಾಲೂಕು ತಹಶೀಲ್ದಾರ್ ಪುರಂದರ, ಕಂದಾಯ ಇಲಾಖೆಯ ಪಳಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಶಶಿ ಸುಬ್ರಮಣಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವೀಣಾ ನಾಯಕ್, ಪಟ್ರಪಂಡ ರಘು ನಾಣಯ್ಯ ಮತ್ತು ಮೃತರ ಕುಟುಂಬದವರು ಹಾಜರಿದ್ದರು. ತೋರದಲ್ಲಿ ಶವ ಶೋಧನಾ ಕಾರ್ಯಾಚರಣೆಯು
ಇಂದು ಎನ್‍ಡಿಆರ್‍ಎಫ್‍ನ ಕಮಾಂಡರ್ ಉದಿತ್ ಕುಮಾರ್ ದೀಕ್ಷಿತ್ ನೇತೃತ್ವದಲ್ಲಿ ನಡೆಯಿತು.