ಕುಶಾಲನಗರ, ಆ. 22: ಕುಶಾಲನಗರ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಹೈವೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪಟ್ಟಣದ ಹೆದ್ದಾರಿ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ಸಂಪೂರ್ಣ ಮಣ್ಣು ತ್ಯಾಜ್ಯ ಸೇರಿ ನೀರಿನ ಹರಿವಿಗೆ ತೊಡಕುಂಟಾಗಿತ್ತು.
ಈ ಹಿನ್ನೆಲೆ ಪ.ಪಂ. ಆರೋಗ್ಯಾಧಿಕಾರಿ ಉದಯಕುಮಾರ್ ನೇತೃತ್ವದಲ್ಲಿ 30ಕ್ಕೂ ಅಧಿಕ ಪೌರಕಾರ್ಮಿಕರು ಎರಡೂ ಕಡೆಗಳ ಚರಂಡಿ ಮತ್ತು ರಸ್ತೆ ಬದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಪಟ್ಟಣದ ವಿವಿಧ ಬಡಾವಣೆಗಳ ಸ್ವಚ್ಛತೆ ಪೂರ್ಣಗೊಂಡ ನಂತರ ಪೌರ ಕಾರ್ಮಿಕರು ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿಯಿಂದ ಬೈಚನಹಳ್ಳಿ ತನಕ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆದು ಸಂಪೂರ್ಣ ಸ್ವಚ್ಛ ಹೆದ್ದಾರಿಯಾಗಿ ಪರಿವರ್ತಿಸುವಲ್ಲಿ ಸಫಲರಾದರು.
ಈ ಸಂದರ್ಭ ಪ.ಪಂ. ದಫೇದಾರ್ ಕುಮಾರ್, ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ವ್ಯಾಪ್ತಿಯ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.