ಮಡಿಕೇರಿ, ಆ. 20: ಒಂದೊಮ್ಮೆ ಒಟ್ಟಿಗೇ ಮೂವರು ಸಚಿವರನ್ನು ಕಂಡಿದ್ದ ಕೊಡಗು ಜಿಲ್ಲೆ ನಂತರದ ವರ್ಷಗಳಲ್ಲಿ ಜಿಲ್ಲೆಯವರೇ ಸಚಿವರಾಗುವ ಅವಕಾಶದಿಂದ ನಿರಂತರವಾಗಿ ವಂಚಿತವಾಗುತ್ತಲೇ ಬರುತ್ತಿರುವದು ಕೊಡಗಿನ ರಾಜಕೀಯ ಪರಿಸ್ಥಿತಿಯಾಗಿದೆ. ರಾಜಕೀಯ ಇತಿಹಾಸದಲ್ಲಿ ಯಂ.ಸಿ. ನಾಣಯ್ಯ, ಬಿ.ಎ. ಜೀವಿಜಯ ಅವರುಗಳ ಬಳಿಕ ಈ ಹಿಂದೆ 1999- 2003ರ ಅವಧಿಯಲ್ಲಿ ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಕೊಡಗು ಜಿಲ್ಲೆ ವಿಶೇಷವಾಗಿ ಗುರುತಿಸಲ್ಪಟ್ಟಿತ್ತು. ಯಾಕೆಂದರೆ ಆ ಸಂದರ್ಭದಲ್ಲಿ ಯಾರೂ ಊಹಿಸದಿದ್ದ ರೀತಿಯಲ್ಲಿ ಕೊಡಗು ಜಿಲ್ಲೆಗೆ ಮೂವರು ಸಚಿವರು ನೇಮಕ ಗೊಂಡಿದ್ದರು.ಕೊಡಗಿನ ಕೋಟಾ ಎಂಬಂತೆ ಆ ಸಂದರ್ಭದಲ್ಲಿ ಎಂ.ಎಂ. ನಾಣಯ್ಯ (ಈಗ ದಿವಂಗತ) ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ಮಹಿಳಾ ಮೀಸಲಾತಿ (ಪರಿಶಿಷ್ಟ ಪಂಗಡ)ಯಲ್ಲಿ ಜಯಗಳಿಸಿದ್ದ ಆಗಿನ ವೀರಾಜಪೇಟೆ ಕ್ಷೇತ್ರದ ಶಾಸಕಿ ಸುಮಾವಸಂತ್ ಹಾಗೂ ಅಲ್ಪಸಂಖ್ಯಾತ ಪ್ರಾತಿನಿಧ್ಯದಲ್ಲಿ (ಕ್ರಿಶ್ಚಿಯನ್) ಕೊಡಗಿನ ಎಂಎಲ್ಸಿ ಯಾಗಿದ್ದ ಟಿ.ಜಾನ್ ಅವರು ರಾಜ್ಯಮಟ್ಟದಲ್ಲಿ ಪರಿಗಣ&divound; Éಯಾಗುವ ಮೂಲಕ ಕೊಡಗಿಗೆ ಮೂರು ಸಚಿವ ಸ್ಥಾನ ದೊರೆತಂತಾಗಿತ್ತು.2004ರಲ್ಲಿ : ಇದಾದ ಬಳಿಕ 2004ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಎಂ.ಎಂ. ನಾಣಯ್ಯ ಅವರ ಎದುರು ಕೆ.ಜಿ. ಬೋಪಯ್ಯ ಜಯ ಸಾಧಿಸಿದ್ದರೆ, ವೀರಾಜಪೇಟೆ ಯಲ್ಲಿ (ಮೊದಲ ಪುಟದಿಂದ) ಸುಮಾವಸಂತ್ ವಿರುದ್ಧ ಹೆಚ್.ಡಿ. ಬಸವರಾಜು ಅವರು ಗೆಲವು ಸಾಧಿಸಿದರು. ಸೋಮವಾರಪೇಟೆ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ ಅವರು ಜಯ ಗಳಿಸಿದ್ದರು. ಈ ಅವಧಿಯಲ್ಲಿ ಧರಂಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು; ಈ ಅವಧಿಯಲ್ಲಿ ಕೊಡಗಿನ ಯಾರಿಗೂ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿರಲಿಲ್ಲ. ಈ ಅವಧಿಯಲ್ಲಿ ಅಲಂಗೂರು ಶ್ರೀನಿವಾಸ್ ಉಸ್ತುವಾರಿ ಸಚಿವರಾಗಿದ್ದರು. ನಂತರದಲ್ಲಿ ರಾಜಕೀಯ ಚದುರಂಗದಾಟವೂ ನಡೆದು ಹೋಗಿದ್ದು ಇತಿಹಾಸ.
ಇದಾದ ಬಳಿಕ : 2008ರಲ್ಲಿ ನಡೆದ ಮತ್ತೊಂದು ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರಕಾರ ರಚನೆಗೊಂಡಿತ್ತು. ಈ ಸಂದರ್ಭ ಕ್ಷೇತ್ರ ಪುನರ್ ವಿಂಗಡಣೆಯಂತೆ ಮೂರು ವಿಧಾನಸಭಾ ಕ್ಷೇತ್ರವಾಗಿದ್ದ ಕೊಡಗು ಒಂದನ್ನು ಕಳೆದುಕೊಂಡು ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಈ ಚುನಾವಣೆಯಲ್ಲಿ ವೀರಾಜಪೇಟೆಯಿಂದ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿಯಿಂದ ಅಪ್ಪಚ್ಚುರಂಜನ್ ಜಯಗಳಿಸಿದ್ದರು. ಈ ಸರಕಾರದಲ್ಲಿ ಆರಂಭದ 20 ತಿಂಗಳು ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಕೆ.ಜಿ. ಬೋಪಯ್ಯ ಅವರು ಬಳಿಕ ವಿಧಾನಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳನ್ನು (ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್) ಕಂಡ ಈ ಅವಧಿಯಲ್ಲಿ ಕೊನೆಯ ಹಂತದಲ್ಲಿ ಕೇವಲ ಒಂದಷ್ಟು ತಿಂಗಳು ಮಾತ್ರ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ರಿಗೆ ಸಚಿವರಾಗುವ ಅತ್ಯಲ್ಪ ಅವಕಾಶ ದೊರೆತಿತ್ತು. ಈ ಕೆಲವು ತಿಂಗಳನ್ನು ಹೊರತುಪಡಿಸಿದರೆ, ಕೊಡಗಿನವರೇ ಕೊಡಗಿನ ಸಚಿವರಾಗಲಿಲ್ಲ. ಆರಂಭದಲ್ಲಿ ಮಂಗಳೂರಿನ ಕೃಷ್ಣ ಪಾಲೇಮಾರ್ ಉಸ್ತುವಾರಿ ಸಚಿವರಾದರೆ; ಬಳಿಕ ರೇಣುಕಾಚಾರ್ಯ ಅವರು ನಿಯುಕ್ತಿಗೊಂಡರೂ ಕೊಡಗಿನತ್ತ ಅವರು ತಲೆ ಹಾಕಲಿಲ್ಲ. ಮತ್ತೊಬ್ಬ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿದ್ದು, ಜಿಲ್ಲೆಯವರಲ್ಲದ ಸಿ.ಎಚ್. ವಿಜಯಶಂಕರ್ ಅವರು ಈ ಅವಧಿಯಲ್ಲೂ ಕೊಡಗಿನವರು ಪೂರ್ಣ ಪ್ರಮಾಣದಲ್ಲಿ ಸಚಿವರಾಗಲಿಲ್ಲ.
2013ರ ಚುನಾವಣೆ
2013ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ರಚನೆಗೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಕೊಡಗಿನ ಎರಡು ಕ್ಷೇತ್ರದಿಂದ ಚುನಾಯಿತರಾಗಿದ್ದು, ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಈ ಅವಧಿಯಲ್ಲೂ ಜಿಲ್ಲೆಯವರು ಸಚಿವರಾಗಲಿ, ಉಸ್ತುವಾರಿ ಸಚಿವರಾಗಲಿ ಆಗಲಿಲ್ಲ. ಬದಲಿಗೆ ನೆರೆ ಜಿಲ್ಲೆಯ ಪ್ರತಿನಿಧಿಗಳಾದ ಡಾ. ಹೆಚ್.ಸಿ. ಮಹದೇವಪ್ಪ, ದಿನೇಶ್ಗುಂಡೂರಾವ್ ಹಾಗೂ ಡಾ. ಎಂ.ಆರ್. ಸೀತಾರಾಮ್ ಅವರುಗಳು ಕೊಡಗಿನ ಉಸ್ತುವಾರಿ ಸಚಿವರುಗಳಾಗಿದ್ದರು.
ಮತ್ತೆಯೂ ಈಡೇರದ ಕನಸು
2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಆರಿಸಿ ಬಂದರೂ ಆರಂಭದಲ್ಲಿ ಸರಕಾರ ರಚನೆಯಿಂದ ವಿಫಲಗೊಂಡಿತ್ತು. ಕೊಡಗಿನಿಂದ ಹಿಂದಿನ ಅವಧಿಯ ಶಾಸಕರುಗಳೇ ಆದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಚುನಾಯಿತರಾಗಿದ್ದರು. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೊಂಡು ಈಗ ಕಳೆದಿರುವ 14 ತಿಂಗಳ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು; ನೆರೆ ಜಿಲ್ಲೆಯವರಾದ ಸಾ.ರಾ. ಮಹೇಶ್ ಅವರಾಗಿದ್ದರು.
ಇದೀಗ ಮತ್ತೆ ಹುಸಿಯಾದ ನಿರೀಕ್ಷೆ
ರಾಜಕೀಯದಲ್ಲಿನ ಬೆಳವಣಿಗೆಯಲ್ಲಿ ಇದೀಗ ಬಿಜೆಪಿ ಸರಕಾರ ಮತ್ತೆ ರಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಸತತವಾಗಿ ಮೂರು - ನಾಲ್ಕು ಅವಧಿಯಿಂದ ಪ್ರತಿನಿಧಿಸುತ್ತಿರುವ ಇಬ್ಬರು ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಇವರುಗಳ ಪೈಕಿ ಯಾರಿಗಾದರೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೀಗ ಮತ್ತೆ ಹುಸಿಯಾಗಿದೆ. ಸ್ಪೀಕರ್ ಸ್ಥಾನ ಖಚಿತ ಎಂಬಂತಿದ್ದ ಕೆ.ಜಿ. ಬೋಪಯ್ಯ ಅವರಿಗೆ ಈ ಸ್ಥಾನವೂ ಇಲ್ಲ ಅತ್ತ ಸಚಿವ ಸ್ಥಾನವೂ ಇಲ್ಲ. ಇನ್ನು ತಾ. 20 ರಂದು ನೂತನ ಸಚಿವರ ಪ್ರಮಾಣ ವಚನ ಸಂದರ್ಭದ ಕೊನೆ ಹಂತದವರೆಗೂ ಸಚಿವ ಸ್ಥಾನ ಸಿಗಲಿದೆ ಎಂದೇ ಬಿಂಬಿತರಾಗಿದ್ದ ಅಪ್ಪಚ್ಚುರಂಜನ್ ಅವರೂ ವಂಚಿತರಾಗಿದ್ದಾರೆ. ಹಲವರ ಮಾತಿನಂತೆ ಕೊಡಗು ಆಟಕ್ಕುಂಟು... ಲೆಕ್ಕಕ್ಕಿಲ್ಲ ಎಂಬ ಮಾತು ಕೂಡ ನಿಜ ಎಂಬಂತಾಗಿದೆ.
- ಶಶಿ ಸೋಮಯ್ಯ