ಶನಿವಾರಸಂತೆ, ಆ. 20: ಆಗಸ್ಟ್ ಮೊದಲ ವಾರದ ಅತಿವೃಷ್ಟಿ ಸಂದರ್ಭ ಗದ್ದೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಂದಿರುವದಿಲ್ಲ ಎಂದು ಗ್ರಾಮದ ವೀರೇಂದ್ರ ಮನೆಯವರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಸಹಾಯ ಕೋರಿದ್ದಾರೆ.

ಎಂ.ಕೆ. ದೊಡ್ಡಯ್ಯ (31) ತಾ. 10 ರಂದು ಬೆಳಿಗ್ಗೆ ಗದ್ದೆಗೆ ಹೋಗಿದ್ದು, ಈ ವರೆಗೂ ಮನೆಗೆ ಬಂದಿಲ್ಲ. ಗ್ರಾಮಸ್ಥರು ಹುಡುಕಾಡಿದರೂ ಅವರ ಸುಳಿವು ಸಿಕ್ಕಿಲ್ಲ. ಆದರೆ, ಅವರು ಧರಿಸಿದ್ದ ಚಪ್ಪಲಿಗಳು ಮಾತ್ರ ಗದ್ದೆಯ ಬಳಿ ರಸ್ತೆ ಮೇಲೆ ಸಿಕ್ಕಿರುತ್ತವೆ. ಅಂದು ಸಂಜೆಯೇ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮನೆಯಲ್ಲಿ ಅನಾರೋಗ್ಯಪೀಡಿತ ವೃದ್ಧ ತಾಯಿ ಹಾಗೂ ಸಹೋದರಿ ಇದ್ದು, ದೊಡ್ಡಯ್ಯ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪ್ರಸ್ತುತ ಆ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ದೂರು ನೀಡಿದ ನಂತರ ಯಾರೂ ಗ್ರಾಮಕ್ಕಾಗಲೀ ಮನೆಗಾಗಲಿ ಭೇಟಿ ನೀಡಿರುವದಿಲ್ಲ. ಯಾವ ಅಧಿಕಾರಿಯೂ ಬಂದು ಮಾಹಿತಿ ಪಡೆದಿರುವದಿಲ್ಲ ದೊಡ್ಡಯ್ಯನನ್ನು ಪತ್ತೆ ಹಚ್ಚಲು ನೆರವು ನೀಡುವಂತೆ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.