ಕುಶಾಲನಗರ, ಆ. 20: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು ಅಭಿವೃದ್ಧಿಪಡಿಸಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಬಲಮುರಿ ದೇವಾಲಯ ಬಳಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಹದಗೆಟ್ಟಿರುವ ರಸ್ತೆ ನಡುವೆ ಬಾಳೆಗಿಡಗಳನ್ನು ನೆಟ್ಟು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.

ಜಿಪಂ ಅಧೀನಕ್ಕೆ ಬರುವ ರಸ್ತೆ 3 ದಶಕಗಳಿಂದ ಅಭಿವೃದ್ಧಿ ಕಂಡಿಲ್ಲ. ರಸ್ತೆಯ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕೂಡಲೆ ಕಾಮಗಾರಿ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ಜಿ.ಪಂ. ಮುಖ್ಯ ಅಭಿಯಂತರರು ಭೇಟಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಹಾಯಕ ಅಭಿಯಂತರ ಸೈಜಿನ್ ಪೀಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಪ್ರತಿಕ್ರಿಯಿಸಿದ ಸೈಜಿನ್ ಪೀಟರ್, ಒಟ್ಟು 4 ಕಿಮೀ ಉದ್ದದ ರಸ್ತೆಯಲ್ಲಿ 1.5 ಕಿಮಿ ತನಕ ಮಾತ್ರ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ. ಉಳಿದ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಸ್ಥಳಕ್ಕೆ ಭೇಟಿ ನೀಡಿ ಜಿಪಂ ಸಹಾಯಕ ಅಭಿಯಂತರ ಕೀರ್ತನ್ ಪ್ರತಿಭಟನಾಕಾರರನ್ನು ಸಮಾಧಾನಿಸಿ ಮನವಿ ಸ್ವೀಕರಿಸಿದರು. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬೃಹತ್ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮಕೈಗೊಳ್ಳಲಾಗುವದು. ಲೋಕೋಪಯೋಗಿ ಇಲಾಖೆ ಮೂಲಕ 1.5 ಕಿಮೀ ರಸ್ತೆ ಕಾಮಗಾರಿ ಮುಗಿಸಿದ ಬಳಿಕ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಉಳಿದ 2.5 ಕಿಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದು ಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಮುಳ್ಳುಸೋಗೆ ಗ್ರಾಪಂ ಸದಸ್ಯರುಗಳಾದ ಡಿ.ಎಸ್. ಹರೀಶ್, ಜಿ.ಬಿ.ಜಗದೀಶ್, ಸ್ಥಳೀಯ ನಿವಾಸಿಗಳು ಮತ್ತು ಗ್ರಾಮಸ್ಥ ರಾದ ಎಸ್.ಬಿ. ನಂದಕುಮಾರ್, ಪ್ಯಾಟ್ರಿಕ್,ಕುಮಾರ್, ಲಿಂಗಂ, ನಂಜುಂಡ, ಉಮೇಶ್, ಮಂಜು, ಶ್ರೀನಿವಾಸ್, ಕೃಷ್ಣಪ್ಪ ಮತ್ತಿತರರು ಇದ್ದರು.