ಮಡಿಕೇರಿ, ಆ. 20: ಬಡವರು, ನಿರ್ಗತಿಕರು, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ದಿ.ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅರಸು ಅವರ ಪ್ರಾಮುಖ್ಯತೆಯನ್ನು ಇಂದಿನ ಯುವಜನರು ತಿಳಿದುಕೊಳ್ಳಬೇಕು. ಇಂದು ನಾವು ಏನು ಮಾಡಿದ್ದೇವೆ ಎಂಬದು ನಾಳಿನ ಜನರಿಗೆ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಬೇಕು. ಅಂತಹ ಸಾಲಿಗೆ ಡಿ.ದೇವರಾಜ ಅರಸು ಅವರು ಸಲ್ಲುತ್ತಾರೆ ಎಂದು ಹೇಳಿದರು. ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಮಾತನಾಡಿ ಡಿ.ದೇವರಾಜ ಅರಸು ಅವರು ಅಸಾಮಾನ್ಯ ಶಕ್ತಿ ಎಂದು ಅವರು ಬಣ್ಣಿಸಿದರು.
ಹಲವು ಏರಿಳಿತಗಳನ್ನು ಕಂಡ ಅಪರೂಪದ ರಾಜಕಾರಣಿ. ಅಖಂಡ ಕರ್ನಾಟಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಡಿ.ದೇವರಾಜ ಅರಸು ಅವರ ಕರ್ತವ್ಯ ನಿಷ್ಟೆ ಅದ್ಭುತವಾದದ್ದು ಎಂದರು.
ಹಾವನೂರು ವರದಿ ಜಾರಿ, ಭೂಸುಧಾರಣೆ ಮತ್ತಿತರ ಕಾರ್ಯಕ್ರಮಗಳು ಹಾಗೂ ಜೀತಪದ್ಧತಿ ಮತ್ತು ಮಲಹೊರುವ ಪದ್ಧತಿ ನಿರ್ಮೂಲನೆ ಮಾಡಿದರು ಎಂದರು. ದೇಶದ ಇತಿಹಾಸದಲ್ಲಿಯೇ ಭೂ ಸುಧಾರಣೆಯನ್ನು ಜಾರಿಗೊಳಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಜಿ.ಪಂ.ಸಿಇಒ ಕೆ. ಲಕ್ಷ್ಮೀಪ್ರಿಯಾ, ಇತರರು ಇದ್ದರು.ಬಿಸಿಎಂ ಇಲಾಖಾ ಅಧಿಕಾರಿ ಶಿವಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹರ್ಷಿತ ತಂಡ ನಾಡಗೀತೆ ಹಾಡಿದರು. ಭಾರತಿ ನಿರೂಪಿಸಿ ಸದ್ಭಾವನಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ಬೋಧಿಸಿದರು.