ಶ್ರೀಮಂಗಲ, ಆ. 20: ಸತತ 2 ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ಪ್ರಾಕೃತಿಕ ವಿಪತ್ತಿಗೆ ತುತ್ತಾದ ಪ್ರದೇಶವೆಂದು ಪರಿಗಣಿಸಿ ಜಿಲ್ಲೆಯ ಜನರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಜಿಲ್ಲೆಯ ಎಲ್ಲಾ ಬೆಳೆಗಾರರು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಜೀವನಾಧಾರವಾದ ಬೆಳೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದು, ಬೆಳೆಗಾರರ ಕುಟುಂಬಗಳÀನ್ನು ನಿಯಮ ಸಡಿಲಿಸಿ ವಿಶೇಷ ಪ್ರಕರಣದಡಿ ವಿಪತ್ತಿನ ಹೊಡೆತದಿಂದ ಚೇತರಿಸಿ ಕೊಳ್ಳುವವರೆಗೆ ಸಣ್ಣ ಬೆಳೆಗಾರರನ್ನು ಬಿ.ಪಿ.ಎಲ್ ಪಟ್ಟಿಗೆ ಸೇರಿಸಿ ಉಚಿತ ಆರೋಗ್ಯ, ಶಿಕ್ಷಣ ಮತ್ತು ಪಡಿತರ ಸೌಲಭ್ಯವನ್ನು ನೀಡಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಲಾಯಿತು.

ಗೋಣಿಕೊಪ್ಪ ಸಿಲ್ವರ್‍ಸ್ಕೈ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಉಭಯ ಸಂಘಟನೆಗಳು ಕೊಡಗಿನ ಸಮಸ್ಯೆಗಳ ಬಗ್ಗೆ ವಿಷಯಾಧರಿತವಾಗಿ ಒಂದೇ ವೇದಿಕೆಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡವು. ಈ ನಿಟ್ಟಿನಲ್ಲಿ ತಾ.23 ರಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಬೆಳೆಗಾರರ ಪುನಶ್ಚೇತನಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ವಿಶೇಷ ಪ್ಯಾಕೇಜ್ ರೂಪಿಸಬೇಕು. ಇಲ್ಲದಿದ್ದರೆ ಇಂತಹ ಪ್ರಾಕೃತಿಕ ದುರಂತಗಳಿಂದ ಚೇತರಿಸಿಕೊಳ್ಳಲಾಗದೆ ಕೃಷಿಯಿಂದ ರೈತ ಕುಟುಂಬಗಳು ವಿಮುಖರಾಗುವ ಆತಂಕದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸ ಬೇಕಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸತತ 2 ವರ್ಷದಿಂದ ಭಾರೀ ಮಳೆ, ಪ್ರವಾಹ, ಭೂ ಕುಸಿತದಿಂದ ಜಿಲ್ಲೆಯ ಜನರು ಸಂಕಷ್ಟ ಅನುಭವಿಸುತ್ತಿದ್ದು, ಅದರಲ್ಲಿ ಮುಖ್ಯವಾಗಿ ಕಾಫಿ, ಕರಿಮೆಣಸು, ಅಡಿಕೆ, ಭತ್ತ ಬೆಳೆ ವ್ಯವಸಾಯ ಮಾಡುತ್ತಿರುವ ಬೆಳೆಗಾರರ ಮೇಲೆ ನೇರವಾಗಿ ಹೊಡೆತ ಬಿದ್ದಿದೆ. ಇದರಿಂದ ಚೆತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಿರುವದರಿಂದ ಜಿಲ್ಲೆಯ ಬೆಳೆಗಾರರು ಎಲ್ಲಾ ಬ್ಯಾಂಕ್‍ಗಳಲ್ಲಿ ಹೊಂದಿರುವ ಸಾಲ, ಆಭರಣ ಸಾಲ, ಬೆಳೆ ಸಾಲ, ಅವಧಿ ಸಾಲ, ಅಭಿವೃದ್ಧಿ ಸಾಲ, ಪಿಗ್ಮಿ ಸಾಲ, ಕೃಷಿ ಉತ್ಪನ್ನ ಅಡಮಾನ ಸಾಲ ಸೇರಿದಂತೆ ಎಲ್ಲಾ ವಿಧದ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಬ್ಯಾಂಕ್ ಹಾಗೂ ಹಣಕಾಸು ನೀಡಿರುವ ಸಂಘ ಸಂಸ್ಥೆಗಳು ಯಾವದೇ ರೀತಿಯಲ್ಲಿ ಬಲತ್ಕಾರದ ಸಾಲ ವಸೂಲಾತಿಗೆ ಮುಂದಾU Àಬಾರದು ಮತ್ತು ಸಾಲ ಮನ್ನಾ ಮಾಡುವ, ಈಗಾಗಲೇ ಬೆಳೆಗಾರರ ಸಾಲ ಮರುಪಾವತಿಸಲು ನ್ಯಾಯಾಲಯ, ಡಿ.ಆರ್.ಟಿ ಗಳಲ್ಲಿ ದಾವೆ ಹೂಡಿರುವ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳು ಅಂತಹ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಮತ್ತು ಬೆಳೆಗಾರರ ಸಂಕಷ್ಟದ ಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ (ಡಿ.ಎಲ್.ಬಿ.ಸಿ) ಮತ್ತು ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿಗೆ ಲಿಖತ ಮನವಿ ಸಲ್ಲಿಸಿ ಗಮನ ಸೆಳೆಯಲು ನಿರ್ಧರಿಸಲಾಯಿತು.

ಎನ್.ಡಿ.ಆರ್.ಎಫ್ ಮಾನದಂಡ ದಂತೆ ಬೆಳೆ ಪರಿಹಾರ ನೀಡಿದರೆ ಸಾಕಾಗುವದಿಲ್ಲ. ಇದರಿಂದ ಬೆಳೆ ನಷ್ಟದ ಶೇಕಡ 10 ರಷ್ಟನ್ನೂ ಸಹ ಭರಿಸಿದಂತಾಗುವದಿಲ್ಲ. ಬೆಳೆಗಾರರ ಪರಿಸ್ಥಿತಿ ಚೇತರಿಸಿಕೊಳ್ಳು ವವರೆಗೆ ಉಚಿತ ಆರೋಗ್ಯ, ಶಿಕ್ಷಣ ಮತ್ತು ಪಡಿತರವನ್ನು ಸರ್ಕಾರ ನೀಡಬೇಕಾಗಿದೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಿದರೆ ಸಾಕಾಗುವದಿಲ್ಲ. ಜನರಿಗೆ ಉಂಟಾದ ಭೂಕುಸಿತ, ಆಸ್ತಿಪಾಸ್ತಿಗೆ ಉಂಟಾಗಿರುವ ಹಾನಿ ಸರಿಪಡಿಸಲು ಸಹ ಪರಿಹಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಅರ್ಜಿಗಳನ್ನು ಸ್ವೀಕರಿಸಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.

ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಸರ ಸ್ನೇಹಿಯಾದ ಜಿಲ್ಲೆಯ ಕಾಫಿ ಮತ್ತು ಭತ್ತದ ಬೆಳೆಯ ವ್ಯವಸಾಯಕ್ಕೂ ವಿಸ್ತರಿಸಬೇಕು. ಈ ಬೆಳೆಯನ್ನೇ ವ್ಯವಸಾಯ ಮಾಡುತ್ತಿರುವ ರೈತ ಕುಟುಂಬದ ತಲಾ ಎಲ್ಲಾ ಸದಸ್ಯರಿಗೆ ವಾರ್ಷಿಕ 365 ದಿನದ ಕೂಲಿಯನ್ನು ನೀಡಬೇಕು. ಇದರಿಂದ ಕಾಫಿ ಹಾಗೂ ಭತ್ತದ ವ್ಯವಸಾಯದಲ್ಲಿ ಉತ್ಪಾದನಾ ವೆಚ್ಚ ತಗ್ಗಿಸಲು ಅನುಕೂಲವಾಗಲಿದೆ. ಬೆಳೆಗಾರರಿಗೂ ನೆರವು ನೀಡಿದಂತಾಗು ತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸ ಲಾಯಿತು.

ಕಾಫಿ ಉದ್ಯಮದ ಸಂಕಷ್ಟವು ತೀವ್ರವಾಗಿದ್ದು, ಕಳೆದ ಎರಡು ದಶಕದಿಂದ ಉತ್ಪಾದನಾವೆಚ್ಚ ಹೆಚ್ಚಳ, ಬೆಲೆ ಕುಸಿತ, ಹವಮಾನ ವೈಪರೀತ್ಯದಿಂದ ನಲುಗಿರುವ ಬೆಳೆಗಾರರಿಗೆ ಸತತ 2 ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ. 12 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದ ಕಾಫಿ ಕೆಫೆ ಡೇ ಮಾಲೀಕ ಸಿದ್ಧಾರ್ಥ್ ಅವರು ಸಂಕಷ್ಟದಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಯ ಮಾರ್ಗ ಹಿಡಿದಿರು ವದು ಅತ್ಯಂತ ಶೋಚನೀಯ. ಈ ಪ್ರಕರಣ ಕಾಫಿ ಬೆಳೆಗಾರನ ದುಸ್ಥಿತಿಯನ್ನು ತೆರೆದಿಟ್ಟಿದೆ. ಹೀಗಿರುವಾಗ ಸಣ್ಣ ಹಾಗೂ ಮಧ್ಯಮ ಬೆಳೆಗಾರರ ಸಂಕಷ್ಟ ಎಷ್ಟಿದೆ ಎಂಬದನ್ನು ಊಹಿಸಿಕೊಳ್ಳ ಬಹುದಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಆರಂಭದಲ್ಲಿ ಜಿಲ್ಲೆಯ ಮಹಾಮಳೆಯ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಸಮಿತಿ ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಮದ್ರೀರ ಗಿರೀಶ್, ಉಭಯ ಸಂಘಟನೆಯ ಪ್ರಮುಖರಾದ ಅಜ್ಜಮಾಡ ರಾಜು ನಂಜಪ್ಪ, ಮುಲ್ಲೇಂಗಡ ಮಣಿ ಮುತ್ತಣ್ಣ, ಕೋಳೆರ ರಾಜಾ ನರೇಂದ್ರ, ಕಳ್ಳೇಂಗಡ ಪೂವಣ್ಣ, ಅಜ್ಜಿಕುಟ್ಟೀರ ಮಾದಯ್ಯ, ಚೊಟ್ಟೇಯಂಡಮಾಡ ವಿಶ್ವನಾಥ್, ಮುಕ್ಕಾಟೀರ ದಾದಾ ಬೋಪಣ್ಣ, ಬಾಚಂಗಡ ಲೀಲಾ ನಂಜಪ್ಪ, ಬಾಚಮಾಡ ನವಿತಾ, ಸುಳ್ಳಿಯಡ ಸ್ವಾತಿ ಕಾಶಿ, ಗುಮ್ಮಟೀರ ಅಕ್ಕಮ್ಮ ಮತ್ತಿತರರು ಮಾತÀನಾಡಿದರು.