ಸಿದ್ದಾಪುರ, ಆ. 20: ಪಾಲಿಬೆಟ್ಟ ಸಮೀಪದ ಮಸ್ಕಲ್ ಎಸ್ಟೇಟ್‍ನ ತೋಟದಲ್ಲಿ ಸ್ಥಳೀಯ ವ್ತಕ್ತಿಯೋರ್ವರ ಗಬ್ಬದ ಹಸುವನ್ನು ಕಳ್ಳತನ ಮಾಡಿ ಹತ್ಯೆಗೈದು ಮಾಂಸ ಮಾಡಿರುವ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮಂಗಳವಾರ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದ ಬಳಿಕ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಆರ್.ಎಸ್.ಎಸ್. ಮುಖಂಡ ಟಿ.ಸಿ. ಚಂದ್ರ ಮಾತನಾಡಿ, ಹಿಂದೂ ಸಂಸ್ಕøತಿಯಲ್ಲಿ ಗೋವು ಮಾತೃ ಸಮಾನವಾಗಿದೆ. ಗೋ ಹತ್ಯೆ ಪಾಪದ ಕೆಲಸವಾಗಿದ್ದು, ಅದರಲ್ಲೂ ಗಬ್ಬದ ಹಸುವನ್ನು ಗುಂಡಿಟ್ಟು ಕೊಂದು ಕ್ರೂರ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದರು. ಅಲ್ಲದೆ ವ್ಯಾಪ್ತಿಯಲ್ಲಿ ಗೋ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ದರು. ಪಾಲಿಬೆಟ್ಟದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿ ಗಳನ್ನು ಕೂಡಲೇ ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ಹಿಂದೂ ಸಮೂಹ ಒಟ್ಟಾಗಿ ಪ್ರತಿಭಟನೆಗೆ ಇಳಿಯಲಿದೆ ಎಂದು ಎಚ್ಚರಿಸಿದರು.

ಆರ್.ಎಸ್.ಎಸ್. ತಾಲೂಕು ಸಂಘಚಾಲಕ್ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ, ಸಿದ್ದಾಪುರ, ಪಾಲಿಬೆಟ್ಟ, ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಅಕ್ರಮ ಗೋಮಾಂಸ ದಂಧೆ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಭಾರತ್ ಮಜ್ದೂರ್ ಸಂಘದ ಕೊಡಗು ಜಿಲ್ಲಾ ಕಾರ್ಯದರ್ಶಿ ಸುರೇಶ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಗೋ ಕಳ್ಳತನ ನಿರಂತರವಾಗಿದೆ, ಹಿಂದೂಗಳ ನಂಬಿಕೆಗೆ ಚ್ಯುತಿ ತರುವ ಕೃತ್ಯದಲ್ಲಿ ದುಷ್ಕರ್ಮಿಗಳು ತೊಡಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಪ್ರತಿಭಟನಾಕಾರರು ಪಾಲಿಬೆಟ್ಟದಲ್ಲಿ ಗೋ ಹತ್ಯೆ ನಡೆಸಿದ ಹಂತಕರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ವಿವಿಧ ಹಿಂದೂ ಸಂಘಟನೆಯ ಮುಖಂಡರುಗಳಾದ ಶರಣ್, ಪ್ರಜೀತ್, ಕುಟ್ಟಂಡ ಮಿರನ್, ಮುಖೇಶ್, ಅಯ್ಯಪ್ಪ, ಗುರುರಾಜ್, ಮೋಹನ್ ಇನ್ನಿತರರು ಹಾಜರಿದ್ದರು.