ಗೋಣಿಕೊಪ್ಪ ವರದಿ, ಆ. 20 : ಗೋಣಿಕೊಪ್ಪ ಕೀರೆಹೊಳೆ ಮತ್ತು ತೋಡುವಿನ ಎರಡು ಬದಿಗಳಲ್ಲಿನ ಸರ್ಕಾರ ನಿಗದಿಪಡಿಸಿರುವ 10 ಮೀಟರ್ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡದಂತೆ ಹಾಗೂ ಅತಿಕ್ರಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸೆಲ್ವಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲಿನ ಆಗ್ರಹದಂತೆ ನಿರ್ಣಯ ತೆಗೆದುಕೊಳ್ಳಲಾಯಿತು.(ಮೊದಲ ಪುಟದಿಂದ) ಸಭೆ ತೆಗೆದುಕೊಂಡಿರುವ ನಿರ್ಣಯವನ್ನು ಜಿಲ್ಲಾಡಳಿತಕ್ಕೆ ಕಳುಹಿಸುವಂತೆ ನಿರ್ಧರಿಸಲಾಯಿತು. ಪಂಚಾಯಿತಿ ಸದಸ್ಯರುಗಳು ಮಳೆಗೆ ಕೀರೆಹೊಳೆ ಹಾಗೂ ತೋಡುವಿನಿಂದ ಪಟ್ಟಣದ ಹಲವಾರು ಬಡಾವಣೆಗಳು ಜಲಾವೃತವಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಇದನ್ನು ಮನಗಂಡು ಪಂಚಾಯಿತಿಯು ಕೀರೆಹೊಳೆ ಎರಡು ಬದಿಗಳನ್ನು ಅತಿಕ್ರಮಣಾಕಾರರಿಂದ ಮುಕ್ತಗೊಳಸಬೇಕಾಗಿದೆ ಎಂಬ ಅಭಿಪ್ರಾಯ ನೀಡಿದರು. ಇದರಂತೆ ನಿರ್ಣಯಕೈಗೊಳ್ಳಲಾಯಿತು.ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶ್ರೀನಿವಾಸ್ ಮುಂದಿನ ವರ್ಷದಿಂದ ಕೀರೆಹೊಳೆ ಹೂಳೆತ್ತುವ ಕಾರ್ಯವನ್ನು ಸಣ್ಣ ನೀರಾವರಿ ನಿಗಮಕ್ಕೆ ವಹಿಸಲಾಗುವದು, ಮಳೆಗಾಲಕ್ಕೆ ಮುಂಚೆ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಲು ಮುಂದಾಗುವದಾಗಿ ತಿಳಿಸಿದರು.
ಸದಸ್ಯ ಪ್ರಕಾಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆ ಪರವಾನಗಿ ನೀಡುವ ಬಗ್ಗೆ ಹಲವು ಗೊಂದಲಗಳಿವೆ. ಅದನ್ನು ನಿವಾರಿಸಲು ನೂತನ ಬೈಲಾ ಅವಶ್ಯಕತೆಯಿದೆ ಎಂದು ತಿಳಿಸಿದರು. ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಸಾಮಾನ್ಯ ಸಭೆಯ ನಡಾವಳಿಕೆಯ ಬಗ್ಗೆ ಯಾವದೇ ಮಾಹಿತಿ ಇಲ್ಲ. ಆದ್ದರಿಂದ ಪಂಚಾಯಿತಿಗೆ ಖಾಯಂ ಕಾರ್ಯದರ್ಶಿಯ ನೇಮಕ ಅವಶ್ಯಕತೆಯಿದೆ ಎಂದು ಸದಸ್ಯ ಮುರುಗ ಒತ್ತಾಯಿಸಿದರು.
ಸದಸ್ಯರಾದ ಕುಲ್ಲಚಂಡ ಗಣಪತಿ ಹಾಗೂ ಧ್ಯಾನ್ ಸುಬ್ಬಯ್ಯ ಮಾತನಾಡಿ, ಕಳೆದ ಸಾಮಾನ್ಯ ಸಭೆಯ ನಡಾವಳಿಕೆಯ ಪುಸ್ತಕವನ್ನು ಸಭೆ ಮುಂದಿಡುವಂತೆ ಆಗ್ರಹಿಸಿದರು. ಜುಲೈ ತಿಂಗಳ ಸಾಮಾನ್ಯ ಸಭೆಯ ನಡಾವಳಿಕೆಗಳನ್ನು ನಮೂದಿಸದ ಕಾರಣ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ರುದ್ರಭೂಮಿ ಸ್ವಚ್ಛತೆ ಇಲ್ಲದಾಗಿದೆ. ಕಾಡು ತುಂಬಿ ಹಾಳಾಗಿದ್ದು ಇದಕ್ಕೆ ಪಂಚಾಯಿತಿ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರ ಸಮಿತಿ ರಚಿಸುವಂತೆ ಸದಸ್ಯರುಗಳಾದ ರಾಮಕೃಷ್ಣ, ಕುಲ್ಲಚಂಡ ಬೋಪಣ್ಣ ಹಾಗೂ ರಾಜಶೇಖರ್ ಆಗ್ರಹಿಸಿದ ಮೇಲೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವದಾಗಿ ಅಧ್ಯಕ್ಷೆ ಹಾಗೂ ಪಿಡಿಓ ಆಶ್ವಾಸನೆ ನೀಡಿದರು.
ಕೋಳಿ ವ್ಯಾಪಾರ ಮಳಿಗೆಗೆ ಪರವಾನಗಿ ಪಡೆದು ಹಂದಿ ಮಾಂಸ ಮಾರಾಟ ನಡೆಸಲಾಗುತ್ತಿದೆ. ಇದರಿಂದ ಪಂಚಾಯಿತಿಗೆ ಆರ್ಥಿಕವಾಗಿ ನಷ್ಟವಾಗಿದೆ. ದಿನಗಳಲ್ಲಿ ಪರವಾನಗಿ ನೀಡುವ ಸಂದರ್ಭ ಯಾವ ಮಾಂಸ ಮಾರುತ್ತಿದ್ದಾರೆ ಎಂಬ ಬಗ್ಗೆ ಪರವಾನಗಿಯಲ್ಲಿ ನಮೂದಿಸುವದು ಸೂಕ್ತ ಎಂದು ಸದಸ್ಯರು ಆಗ್ರಹಿಸಿದರು.
ಸದಸ್ಯ ರಾಮಕೃಷ್ಣ ಮಾತನಾಡಿ ನ್ಯಾಯಾಲಯದಲ್ಲಿ ಇರುವ ವ್ಯಾಜ್ಯದ ಬಗ್ಗೆ ಹಿಂದಿನ ಪಿಡಿಓ ಸಭೆಗೆ ಯಾವುದೇ ಮಾಹಿತಿ ನೀಡದೆ ಮಾಹಿತಿ ಕೊರತೆಯಾಗುತ್ತಿದೆ. ಪರಿಣಾಮ ವ್ಯಾಜ್ಯಗಳಲ್ಲಿ ಹಿನ್ನಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪಿಡಿಓ ಪಂಚಾಯಿತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಸಭೆಗೆ ತಿಳಿಸಲು ಕೋರಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕಾವ್ಯ, ಸದಸ್ಯರಾದ ಯಾಸ್ಮೀನ್, ನಮಿತ, ಜಮ್ಮಡ ಸೋಮಣ್ಣ, ಪ್ರಭಾವತಿ ಇದ್ದರು. -ಸುದ್ದಿಪುತ್ರ