ಮಡಿಕೇರಿ, ಆ.20: ಕಳೆದ ಹಲವಾರು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಕೊಡಗು ಜಿಲ್ಲೆಯನ್ನು ಉಳಿಸಿಕೊಂಡು ಬಂದಿರುವ ಇಬ್ಬರು ಶಾಸಕರನ್ನು ಪ್ರಸಕ್ತ ನೂತನ ಮಂತ್ರಿಮಂಡಲ ರಚನೆ ಸಂದರ್ಭ ಕೈ ಬಿಡಲಾಗಿದೆ. ಇದರಿಂದ ಶಾಸಕರು, ಬಿಜೆಪಿ ಕಾರ್ಯಕರ್ತರು ಮತ್ತು ಜಿಲ್ಲೆಯ ಜನರು ನಿರಾಶರಾಗುವಂತಾಗಿದೆ. ಇಬ್ಬರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ದೊರಕಬಹುದು ಎಂದಿದ್ದ ನಿರೀಕ್ಷೆ ಇದೀಗ ಹುಸಿಯಾಗಿದೆ.ಈ ಬೆಳವಣಿಗೆ ಕುರಿತಾಗಿಇಬ್ಬರು ಶಾಸಕರನ್ನು ಇಂದಿನ “ಶಕ್ತಿ” ಮೊಬೈಲ್ ಮೂಲಕ ಸಂಪರ್ಕಿಸಿತು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಸ್ವರದಲ್ಲಿ ನೋವಿದ್ದರೂ ಮಾತನಾಡುವಾಗ ಅವರು ಅದನ್ನು ಬಹಿರಂಗ ಪಡಿಸಲಿಲ್ಲ. “ಸಚಿವ ಸ್ಥಾನ ದೊರಕದ ಬಗ್ಗೆ ನಾನು ಏನೂ ಹೇಳ ಬಯಸುವದಿಲ್ಲ. ಆದರೆ, ಇದೀಗ ಮಂತ್ರಿ ಮಂಡಲಕ್ಕೆ ಸೇರ್ಪಡೆ ಗೊಂಡವರು
(ಮೊದಲ ಪುಟದಿಂದ) ಒಳ್ಳೆ ಆಡಳಿತ ಕೊಡಲಿ ಎಂದಷ್ಟೇ ಹಾರೈಸುತ್ತೇನೆ. ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಬಯಸುತ್ತೇನೆ”É ಎಂದರು. ಬೋಪಯ್ಯಅವರು ನಾಲ್ಕು ಬಾರಿ ಶಾಸಕರಾಗಿ ಚುನಾಯಿತ ರಾಗಿದ್ದು, ಈ ಹಿಂದೆ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ:-ಸಚಿವ ಸ್ಥಾನ ದೊರಕದಿರುವದರಿಂದ ನನಗೆ ತೀವ್ರ ಅಸಮಾಧಾನವಾಗಿದೆ. ಬಹುತೇಕ ಕೊಡಗಿನಜನ, ಬಹುಪಾಲು ಕೊಡವರು ಬಿಜೆಪಿಗೆ ಯಾವಾಗಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆಶ್ಚರ್ಯವೆಂದರೆ, ನೂತನ ಮಂತ್ರಿಮಂಡಲದಲ್ಲಿ ಶಾಸಕರೇ ಅಲ್ಲದವರನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, 1 ಅಥವಾ 2 ಬಾರಿ ಶಾಸಕರಾದವರನ್ನು ಪರಿಗಣಿಸಲಾಗಿದೆ. ನಾನೂ ಸೇರಿದಂತೆ 5 ಅವಧಿಯಲ್ಲಿ ಶಾಸಞರುಗಳಾಗಿ ಆಯ್ಕೆ ಯಾದವರನ್ನು ನಿರ್ಲಕ್ಷಿಸಲಾಗಿದೆ. ತಿಪ್ಪಾರೆಡ್ಡಿ, ಎನ್.ವೈ. ಗೋಪಾಲಕೃಷ್ಣ, ಉಮೇಶ್‍ಕತ್ತಿ, ಸುಳ್ಯದ ಅಂಗಾರ, ಶ್ರೀನಿವಾಸ್ ಶೆಟ್ಟಿ ಮೊದಲಾದವರು 5 ಅವಧಿಗಿಂತಲೂ ಅಧಿಕ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದು ಪರಿಗಣಿಸದಿರುವದು ಖೇದವುಂಟುಮಾಡಿದೆ. ತಾವು 7 ಮಂದಿ ಶಾಸಕರುಒಟ್ಟು ಸೇರಿ ಪಕ್ಷದ ಹೈಕಮಾಂಡ್‍ಗೆ ಮನವಿ ಸಲ್ಲಿಸಿ ಮರು ಪರಿಗಣಿಸುವಂತೆ ಮನವಿ ಮಾಡಲಿರುವದಾಗಿಯೂ ರಂಜನ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಗೆ ಲೋಕಸಭಾ ಸ್ಥಾನವೂ ಇಲ್ಲ, ಮಂತ್ರಿ ಪದವಿಯೂ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ನಾನೆಂದೂ ಪಕ್ಷದಲ್ಲಿ ಅಧಿಕಾರಕ್ಕಾಗಿ ಜಗಳ ಮಾಡಿದವನಲ್ಲ, ಆದರೆ ಈ ಬಾರಿ ತುಂಬಾ ಬೇಸರವಾಗಿರುವ ಕಾರಣ ಮಾತನಾಡಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ ಭಾರತೀಶ್ ಅವರು ಕೊಡಗಿಗೆ ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಸ್ಥಾನ ಕಲ್ಪಿಸುವ ನಿರೀಕ್ಷೆಯಿದೆ. ಸಚಿವ ಸ್ಥಾನಕ್ಕೆ ಬೇರೆ ಕಡೆಗಳಿಂದ ಬಹು ಸಂಖ್ಯೆಯಲ್ಲಿ ಒತ್ತಡವಿದ್ದುದರಿಂದ ಹಾಗೂ ನಮ್ಮ ಶಾಸಕರು ಶಾಂತ ಸ್ವಭಾವದವರಾಗಿರುವ ಹಿನ್ನೆಲೆಯಲ್ಲಿ ಹೀಗಾಗಿರಬಹುದು. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿರುವದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.