ಕೂಡಿಗೆ, ಆ. 20 : ಕುಶಾಲ ನಗರ ಎ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಚೆಸ್ ಮತ್ತು ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವು ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲಾ ವಿಭಾಗದ ಕ್ರೀಡಾಂಗಣ ದಲ್ಲಿ ನಡೆಯಿತು.
ಕ್ರೀಡಾಕೂಟಕ್ಕೆ ಕುಶಾಲನಗರ ವಲಯ ಮಟ್ಟದ ಕ್ರೀಡಾಕೂಟದ ಕಾರ್ಯದರ್ಶಿ ಡಾ.ಸದಾಶಿವ ಎಸ್.ಪಲ್ಲೇದ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಾಧನೆಗೆ ಕ್ರೀಡೆ ಎಷ್ಟು ಮುಖ್ಯವೋ ಅದೇ ರೀತಿ ಬದುಕಿಗೂ ಅಷ್ಟೇ ಮುಖ್ಯವಾಗಿದೆ. ಸಾಧನೆ ಮಾಡಿದ ಕ್ರೀಡೆಯು ನೇಮಕಾತಿ ಸಂದರ್ಭ ಮತ್ತು ವಿವಿಧ ಹುದ್ದೆಗಳಿಗೆ ಹೋಗುವ ಸಂದರ್ಭ ಕ್ರೀಡೆಯ ಪರಿಗಣನೆ ಮುಖ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬದುಕಿಗೆ ಕ್ರೀಡೆಯನ್ನು ಮುಖ್ಯವಾದ ಅಂಶ ಎಂದು ಪರಿಗಣಿಸಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೂಡಿಗೆ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ ಅವರು ಮಾತನಾಡಿ, ಪಠ್ಯದ ಜೊತೆಗೆ ಕ್ರೀಡೆಯು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿರುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಂಡು, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ತಮ್ಮ ಮುಂದಿನ ಗುರಿ ಸಾಧನೆಯ ಹಾದಿಯಲ್ಲಿಯೂ ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯು ಉತ್ತಮ ಸಾಧನವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಿಕೊಂಡು ಕ್ರೀಡಾ ಮನೋಭಾವನೆ ಬೆಳೆಸಿ ಕೊಂಡು, ಓದಿನಲ್ಲಿಯೂ, ಕ್ರೀಡಾ ಕ್ಷೇತ್ರದಲ್ಲಿಯು ಮುಂದೆ ಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ಆಡಳಿತ ಮಂಡಳಿಯ ಖಜಾಂಚಿ ಎಂ.ಬಿ.ಜಯಂತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಎ.ವಿ.ಸ್ವಾತಿ, ಹಿರಿಯ ಶಿಕ್ಷಕ ದುರ್ಗೇಶ್, ವಿದ್ಯಾರ್ಥಿ ರಕ್ಷಾ ಸಮಿತಿಯ ಅಧ್ಯಕ್ಷೆ ಎಲ್ಸಿ, ಕೂಡಿಗೆಯ ಕಿಶೋರ ಕೇಂದ್ರದ ಮುಖ್ಯೋಪಾಧ್ಯಾಯಿನಿ ಉಮಾ, ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಸುಲೋಚನಾ ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವ್ಯವಸ್ಥಾಪಕರು ಇದ್ದರು.
ಶಿಕ್ಷಕರಾದ ದುರ್ಗೇಶ್, ಸುಲೋಚನಾ ಮತ್ತು ಯೋಗೇಶ್ವರಿ ವಿದ್ಯಾರ್ಥಿಗಳ ತಂಡ ಕಾರ್ಯ ಕ್ರಮವನ್ನು ನಿರ್ವಹಿಸಿದರು. ಕುಶಾಲನಗರ ಎ ವಲಯದ 10 ಶಾಲೆಗಳ ಕ್ರೀಡಾ ಪಟುಗಳು ಆಯಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು.