ಬೊಪ್ಪಡತಂಡ ಚಿಣ್ಣವ್ವ ಅವರಿಗೀಗ 105 ವರುಷ. ಹದಿನೈದು ದಿನದ ಹಿಂದೆ ತೋರದಲ್ಲಿರುವ ಅವರ ಮನೆ ಒಮ್ಮೆಗೆ ಬಿರುಕು ಬಿಡಲಾರಂಭಿಸಿತು. ಅಕ್ಕಪಕ್ಕದವರೆಲ್ಲ ಎಲ್ಲೆಂದರಲ್ಲಿಗೆ ಓಡಲಾರಂಭಿಸಿದರು. ಬೆಟ್ಟ ಬಾಯ್ತೆರೆದು ನೀರು ಹರಿಯಲಾರಂಭಿಸಿತು. ಜೊತೆ ಯಲ್ಲೇ ಕುಸಿಯಲಾರಂಭಿಸಿದ ಬೆಟ್ಟ ತಾನೂ ನೀರೊಡನೆ ಕೆಸರಾಗಿ ಇಳಿದು ಬರಲಾರಂಭಿಸಿತು.
ಮನೆಯೊಳಗಿದ್ದ ಸೊಸೆ ಬೊಪ್ಪಡತಂಡ ಶಾಂತಿ, ಅಳಿಯ ಅಜ್ಜಿಯನ್ನು ಎತ್ತಿಕೊಂಡು ಹೊರಟರು. ಜೊತೆಯಲ್ಲಿ ಮಗಳು- ಏಳು ತಿಂಗಳ ಮೊಮ್ಮಗು ಬೇರೆ. ಎಲ್ಲರೂ ಓಡಿ ದೂರದ ಶೆಡ್ ಒಂದರಲ್ಲಿ ನಿಂತರು. ಅಷ್ಟರಲ್ಲಾಗಲೇ ಇನ್ನೊಂದು ಬದಿಯಲ್ಲಿ ಹಲವು ಮನೆಗಳು ಹಾಗೂ ಹಲವು ಜೀವಗಳನ್ನು ಕೆಸರು ಕೊಚ್ಚಿಕೊಂಡು ಹೋಗಿ ಗರ್ಭ ಸೇರಿಸಿಕೊಂಡಿತು.
ನಿನ್ನೆದಿನ ಕರ್ನಾಟಕ ರಾಜ್ಯ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ. ಅನಂತಶಯನ ಅವರ ನೇತೃತ್ವದಲ್ಲಿ ಅಜ್ಜಿಯ ಕುಟುಂಬವಿದ್ದ ಕೆದಮುಳ್ಳೂರು ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿದಾಗ, ಶಾಂತಿ ತನ್ನ ಕುಟುಂಬದ ಅಳಲು ತೋಡಿಕೊಂಡರು.
ಶಾಲೆಯ ಕೋಣೆಯೆದುರು ರಾಜೀವಿ ಎಂಬಾಕೆ ಅಳುತ್ತಾ ಕುಳಿತಿದ್ದರು. ‘‘ಗಂಡ ಲಿಂಗು ಇನ್ನೂ ಎದ್ದಿರಲಿಲ್ಲ. ಕಾಫಿ ಕಾಸ್ತಿದ್ದೆ. ಅಷ್ಟರಲ್ಲಿ ಮನೆಯೊಳಗೆ ನೀರು ನುಗ್ಗಲಾರಂಭಿಸಿತು. ಕೂಡಲೇ ಇಬ್ಬರೂ ಹೊರಗೆ ಓಡಿ ಪ್ರಭು ಅವರ ಮನೆ ಬಳಿ ಸೇರಿದೆವು. ಅಷ್ಟರಲ್ಲಿ ನಮ್ಮ ಮನೆ ಕೊಚ್ಚಿಹೋಗಿ ನಿಂತಿದ್ದ ಮನೆ ಬಳಿಯೂ ಶಬ್ಧ ಆರಂಭವಾಯಿತು. ಅಲ್ಲಿಂದಲೂ ಓಡಿಬಂದೆವು. ಆ ಮನೆಯೂ ಮಣ್ಣು ಪಾಲಾಯಿತು’’ ಎಂದು ಕಣ್ಣೀರಿಡುತ್ತಾ ರಾಜೀವಿ ನುಡಿದಳು.
ಜಾನಪದ ಕಲಾವಿದರೂ, ರಾಜ್ಯ ಪ್ರಶಸ್ತಿ ವಿಜೇತರೂ ಆದ ಶಾರದ ಮತ್ತು ದೇವಕಿ ಅವರ ಮನೆಗಳಿಗೂ ನೀರು ತುಂಬಿದ್ದು, ಎಲ್ಲರನ್ನೂ ಜಾನಪದ ಪರಿಷತ್ ತಂಡ ಸಂತೈಸಿತು. ಮತ್ತೊಬ್ಬ ಕಲಾವಿದ ರಾಜು ನೀರು ತುಂಬಿದ್ದರೂ ಹಠದಿಂದ ಮನೆಯ ಬಳಿಯೇ ಇದ್ದು, ಅವರಿಗೂ ಸಹಾಯ ಕಳುಹಿಸಲಾಯಿತು.
ಈ ಸಂದರ್ಭ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳಾದ ಅಂಬೆಕಲ್ ಕುಶಾಲಪ್ಪ, ಸಂಪತ್ ಕುಮಾರ್, ವೀರಾಜಪೇಟೆ ಘಟಕಾಧ್ಯಕ್ಷ ಮಹೇಶ್ ನಾಚಯ್ಯ, ರಂಜಿತಾ ಕಾರ್ಯಪ್ಪ, ಪ್ರಮೀಳಾ, ಮುದ್ದಪ್ಪ, ಮಾಜಿ ತಾ.ಪಂ. ಅಧ್ಯಕ್ಷೆ ದೇಚಮ್ಮ ಜೊತೆಗಿದ್ದರು.