ಮಡಿಕೇರಿ, ಆ. 19: ಕಳೆದ ತಾ. 4 ರಂದು ಮಧ್ಯರಾತ್ರಿ ಭಾರೀ ಮಳೆಯ ನಡುವೆ ಕೊಡಗು - ಕೇರಳ ಸಂಪರ್ಕ ಸಾಧಿಸುವ ಪೆರುಂಬಾಡಿ ಹಾಗೂ ಮಾಕುಟ್ಟ ಮಧ್ಯೆ ಭೂಕುಸಿತದಿಂದ ಹಾನಿಗೀಡಾಗಿದ್ದ ರಸ್ತೆ ಇದೀಗ ದುರಸ್ತಿಗೊಂಡಿದ್ದು; ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೆರುಂಬಾಡಿಯಿಂದ ಮುಂದೆ 6 ಕಿ.ಮೀ. ದೂರದ ವಾಟೆಕಾಡು ಹಾಗೂ ಇತರೆಡೆಗಳಲ್ಲಿ ಮೂರು ಕಡೆ ಅಂತರ್ರಾಜ್ಯ ಹೆದ್ದಾರಿ ಕುಸಿತ ಉಂಟಾದ ಹಿನ್ನೆಲೆ ಈ ತನಕ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದರು.ಇದೀಗ ಲೋಕೋಪಯೋಗಿ ಇಲಾಖೆಯಿಂದ ಹಾನಿಗೀಡಾದ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿರುವ ಮೇರೆಗೆ; ಜಿಲ್ಲಾಧಿಕಾರಿಗಳು ನಿರ್ಬಂಧ ಸಡಿಲಿಸುವ ಮೂಲಕ ಈ ಮಾರ್ಗದಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಲಘು ವಾಹನಗಳ ಓಡಾಟಕ್ಕೆ ಹಸಿರು ನಿಶಾನೆ ನೀಡಿದ್ದಾರೆ.ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು; ಪ್ರಯಾಣಿಕರು ಮತ್ತು ಜನತೆಯ ಹಿತದೃಷ್ಟಿಯಿಂದ; ಲೋಕೋಪ ಯೋಗಿ ಇಲಾಖೆ ತಾತ್ಕಾಲಿಕ ರಿಪೇರಿಗೊಳಿಸಿರುವ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ.ಜಿಲ್ಲಾಧಿಕಾರಿ ಆದೇಶ ಆದೇಶ ಸಂಖ್ಯೆ: ಎಂಎಜಿ/61/2019-20 ರಂತೆ ತಾ. 19.8.2019 ರಂದು ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ; ಪೆರುಂಬಾಡಿ - ಮಾಕುಟ್ಟ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು; ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ಕಾಮಗಾರಿಗಳು, ರಕ್ಷಣಾ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗಿದೆ. ಈ ದಿಸೆಯಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಸಿಆರ್ಪಿಸಿ ಕಾಯ್ದೆ ಸೆಕ್ಷನ್ 144, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರ ಕಲಂ 33, 34(ಬಿ), (ಸಿ), (ಡಿ) ಮತ್ತು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಲಾಗಿದೆ. ಆ ಮೂಲಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಉಲ್ಲೇಖ (2)ರಂತೆ ಹೊರಡಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸುತ್ತಾ ತಾ. 30.9.2019ರವರೆಗೆ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆ ನಿರ್ವಹಿಸಲು ಆದೇಶಿಸಿದ್ದಾರೆ.
ಷರತ್ತುಗಳು
ಈ ರಸ್ತೆಯಲ್ಲಿ ಪ್ರಯಾಣಿಕ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವದಿಲ್ಲ. ಲಾರಿ, ಬಸ್, ಟಿಪ್ಪರ್ ಒಳಗೊಂಡಂತೆ ಯಾವದೇ ರೀತಿಯ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ,
(ಮೊದಲ ಪುಟದಿಂದ) ಸಂಚಾರಕ್ಕೆ ಅನುಮತಿರುವ ವಾಹನಗಳು ಅರಣ್ಯ ಭಾಗದ ಗರಿಷ್ಟ ಗಂಟೆಗೆ 40 ಕಿ.ಮೀ. ವೇಗ ಮೀರದಂತೆ ಹಾಗೂ ನಿಗಧಿತ ಅವಧಿಯಲ್ಲಿ ಈ ಪ್ರದೇಶವನ್ನು ಹಾದು ಹೋಗುವಂತೆ ಸಂಚರಿಸುವದು ಅಲ್ಲದೆ, ಈ ಪ್ರದೇಶದಲ್ಲಿ ವಾಹನಗಳ ತಂಗುವಿಕೆಯನ್ನು ನಿಷೇಧಿಸಲಾಗಿದೆ. ಈ ಆದೇಶದ ಉಲ್ಲಂಘನೆಯು ಕಾನೂನು ರೀತ್ಯಾ ದಂಡನೀಯವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ 1989ರ (ತಿದ್ದುಪಡಿ ನಿಯಮ 1990) ನಿಯಮ 221ಎ (2)ರಂತೆ ಅವಶ್ಯವಿರುವ ಸಂಜ್ಞೆ, ಸೂಚನಾ ಫಲಕವನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಾಗೂ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಲಾಗಿದೆ.