ಸುಂಟಿಕೊಪ್ಪ, ಆ. 19: ನಾಕೂರು-ಮಂಜಿಕೆರೆ ವಿಭಾಗದಲ್ಲಿ ಕಾಡಾನೆಗಳ ಹಿಂಡು ಕೊಳಂಬೆ ರವಿ ಎಂಬವರ ಕೃಷಿ ಗದ್ದೆಗೆ ನುಗ್ಗಿ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿವೆ. ನಾಕೂರು-ಶಿರಂಗಾಲ, ಮಂಜಿಕೆರೆ, ಎಮ್ಮೆಗುಂಡಿ ಭಾಗಗಳಲ್ಲಿ ನಿತ್ಯ ಕಾಡಾನೆಗಳು ಕಾಫಿ ತೋಟ, ಗದ್ದೆ, ಕೃಷಿ ಜಮೀನುಗಳಿಗೆ ಲಗ್ಗೆಯಿಡುತ್ತಿವೆ. ಫಲಭರಿತ ತೆಂಗು, ಬಾಳೆ, ಅಡಿಕೆ ಕಾಫಿ ಗಿಡಗಳನ್ನು ನಾಶಗೊಳಿಸುತ್ತಿವೆ. ಆಹಾರ ಅರಸಿ ಬರುವ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ವಾಸ್ತವ್ಯ ಹೂಡುತ್ತಿದ್ದು, ಕೂಲಿ ಕಾರ್ಮಿಕರು ತೋಟ, ಗದ್ದೆಗಳಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ನಾಕೂರು ಶಿರಂಗಾಲ ಗ್ರಾ.ಪಂ. ಸದಸ್ಯ ಅಂಬೇಕಲ್ ಚಂದ್ರ ಒತ್ತಾಯಿಸಿದ್ದಾರೆ.