ಗೋಣಿಕೊಪ್ಪಲು, ಆ. 19 : ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಕೋಟ್ರಂಗಡ ಕುಟುಂಬಸ್ಥರಿಗೆ ಸೇರಿದ ನೂರಾರು ಎಕರೆ ನಾಟಿ ಮಾಡಿದ ಗದ್ದೆ ರಾಮತೀರ್ಥ ಪ್ರವಾಹದಿಂದಾಗಿ ಲಕ್ಷಾಂತರ ಮೌಲ್ಯದ ಕೃಷಿ ನಷ್ಟ ಉಂಟಾಗಿದೆ ಎಂದು ಕೆ.ಎಂ. ಚಿಣ್ಣಪ್ಪ ತಿಳಿಸಿದ್ದಾರೆ.
ವರ್ಷಂಪ್ರತಿ ಈ ಭಾಗದ ರೈತಾಪಿ ವರ್ಗ ಬಿಳಿಯ, ತುಂಗಾ ಭತ್ತದ ಬಿತ್ತನೆ ಮಾಡುತ್ತಿದ್ದು, ಈ ಬಾರಿಯೂ ಗದ್ದೆಯನ್ನು ಉಳುಮೆ ಮಾಡಿ ನಾಟಿ ಕಾರ್ಯ ಮುಗಿಸ ಲಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಮಳೆ ಯಿಂದಾಗಿ ರಾಮತೀರ್ಥ ಹೊಳೆ ಯಲ್ಲಿ ಪ್ರವಾಹ ಉಂಟಾಗಿ, ನಾಟಿ ಮಾಡಲಾದ ಗದ್ದೆಯಲ್ಲಿ ಮರಳು, ಹೂಳು ತುಂಬಿಕೊಂಡಿದೆ. ಭತ್ತದ ಸಸಿಯು ಕೊಳೆತು ಹೋಗುವ ಸ್ಥಿತಿಯಲ್ಲಿದ್ದು, ನಷ್ಟ ಸಂಭವಿಸಿದೆ ಎಂದು ಚಿಣ್ಣಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷದಲ್ಲಿ ರೈತರು ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಇಲ್ಲದೆ, ಕಾಡು ಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಕೃಷಿಯನ್ನು ಬಿಡುತ್ತಿದ್ದಾರೆ. ಈ ಹಂತದಲ್ಲಿ ಕೃಷಿ ಇಲಾಖೆ ಹಾಗೂ ರಾಜ್ಯ ಸರ್ಕಾರಗಳ ಉತ್ತೇಜನ ಅಗತ್ಯ. ಇದೀಗ ಭತ್ತದ ಗದ್ದೆಯಿಂದ ಮರಳನ್ನು ತೆಗೆಯುವದೇ ಪ್ರಯಾಸದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ರೈತರ ಸಂಕಷ್ಟವನ್ನು ಅರಿತು ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಈ ಭಾಗದಲ್ಲಿ ಭಾರೀ ಮಳೆ, ಗಾಳಿಗೆ ಕಾಫಿ, ಅಡಿಕೆ ಹಾಗೂ ಕಾಳು ಮೆಣಸು ಫಸಲೂ ನೆಲಕಚ್ಚಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
-ಟಿ.ಎಲ್.ಎಸ್.