ಸಿದ್ದಾಪುರ, ಆ. 19: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಂಬಾರಗುಂಡಿ, ಬರಡಿ, ಬೆಟ್ಟದಕಾಡುವಿನ ನದಿ ಪಾತ್ರದಲ್ಲಿ ಈ ಬಾರಿಯ ಪ್ರವಾಹದಿಂದಾಗಿ ನೂರಾರು ಮನೆಗಳು ಕುಸಿದು ನೆಲಸಮವಾಗಿದ್ದು, ನೂರಾರು ಮನೆಗಳು ಹಾನಿಗೊಳಾಗಾಗಿವೆ. ಈ ಕುಟುಂಬಗಳು ನೆಲ್ಯಹುದಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನದಿ ಪಾತ್ರದ ನಿವಾಸಿಗಳಿಗೆ ಗ್ರಾಮದಲ್ಲೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಸಂತ್ರಸ್ತರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಹಿನ್ನಲೆಯಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ ಅಥವಾ ಒತ್ತುವರಿ ಜಾಗಗಳನ್ನು ಗುರುತಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡಬೇಕು, ತಪ್ಪಿದ್ದಲ್ಲಿ ಸಂತ್ರಸ್ತರು ಪರಿಹಾರ ಕೇಂದ್ರಗಳನ್ನು ಬಿಟ್ಟು ಹೋಗುವದಿಲ್ಲವೆಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಕೆ.ಹಕೀಂಮಾತನಾಡಿ ಸಂತ್ರಸ್ತರಿಗೆ ಜಿಲ್ಲಾಡಳಿತ ಪುರ್ನವಸತಿಯನ್ನು ಗ್ರಾಮ ವ್ಯಾಪ್ತಿಯಲ್ಲೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆಯನ್ನು ನಡೆಸಿ ಇನ್ನು ಮುಂದೆ ನದಿ ಪಾತ್ರದಲ್ಲಿ ಮನೆ ನಿರ್ಮಾಣಕ್ಕೆ ನೀಡುವದಿಲ್ಲವೆಂದು ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ತಾ.ಪಂ ಸದಸ್ಯೆ ಸುಹಾದ ಅಶ್ರ್ಪ್, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫೀಯ ಹಾಗೂ ಗ್ರಾ.ಪಂ ಎಲ್ಲಾ ಸದಸ್ಯರುಗಳು ಹಾಜರಿದ್ದರು.
-ವಾಸು