ಸೋಮವಾರಪೇಟೆ,ಆ.19: ವಾರ್ಷಿಕವಾಗಿ ಅತೀ ಹೆಚ್ಚು ಮಳೆಬೀಳುವ ತಾಲೂಕಿನ ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಹೋಬಳಿಯಾದ್ಯಂತ ಮಳೆಯಿಂದ ಕಾಫಿಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.
ಆಗಸ್ಟ್ ಪ್ರಾರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಾತಾವರಣ ಅತೀ ಶೀತದಿಂದ ಕೂಡಿದ್ದು, ಗಾಳಿಯ ರಭಸಕ್ಕೆ ತೋಟದಲ್ಲಿನ ಮರದ ಎಲೆಗಳು ಕಾಫಿ ಗಿಡಗಳ ಮೇಲೆ ಬಿದ್ದ ಪರಿಣಾಮ ಕೊಳೆರೋಗ ಅತೀ ಶೀಘ್ರವಾಗಿ ವ್ಯಾಪಿಸಿದೆ.
ಪರಿಣಾಮ ಕಾಫಿ ಗಿಡದ ಕೊಂಬೆಗಳೊಂದಿಗೆ ಫಸಲು ಕಾಫಿ ಕಾಯಿ ಕೊಳೆಯಲಾರಂಭಿಸಿದ್ದು, ಹರಗ ವ್ಯಾಪ್ತಿಯಲ್ಲಂತೂ ಈಗಾಗಲೇ ಕಾಫಿ ನೆಲಕ್ಕುರುಳುತ್ತಿವೆ.
ಮಳೆ-ಗಾಳಿ ಹೆಚ್ಚಿದ್ದ ಹಿನ್ನೆಲೆ ತೋಟದೊಳಗೆ ಮರಗಳು ಮುರಿದು ಕಾಫಿ ಗಿಡಗಳ ಮೇಲೆಯೇ ಬಿದ್ದಿದ್ದು, ಇವುಗಳನ್ನು ತೆರವುಗೊಳಿಸಲು ಅಸಾಧ್ಯವಾದ ಹಿನ್ನೆಲೆ ಕೊಳೆರೋಗ ಕಾಣಿಸಿಕೊಂಡಿವೆ. ತಾಲೂಕಿನ ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಇಲ್ಲಿಯವರೆಗೆ 150 ಇಂಚಿಗೂ ಅಧಿಕ ಮಳೆಯಾಗಿದೆ. ಹಂಚಿನಳ್ಳಿ ಗ್ರಾಮಕ್ಕೆ ಈವರೆಗೆ 135 ಇಂಚು, ಕೊತ್ನಳ್ಳಿ ಭಾಗಕ್ಕೆ 130 ಇಂಚು ಮಳೆಯಾಗಿದೆ. ಹರಗ ವ್ಯಾಪ್ತಿಯಲ್ಲಿ ಈವರೆಗೆ 130 ಇಂಚಿಗೂ ಅಧಿಕ ಮಳೆಯಾಗಿದೆ. ಒಂದು ವಾರದ ಅವಧಿಯಲ್ಲಿಯೇ 60 ರಿಂದ 70 ಇಂಚಿನಷ್ಟು ಮಳೆಯಾದ ಹಿನ್ನೆಲೆ ವಾತಾವರಣದಲ್ಲಿ ಅತಿಯಾದ ಶೀತ ಉಂಟಾಗಿ ಕೊಳೆರೋಗ ಉಲ್ಬಣಿಸಿದೆ ಎಂದು ಕೃಷಿಕರು ಅಭಿಪ್ರಾಯಿಸಿದ್ದಾರೆ.
ಬೆಟ್ಟಶ್ರೇಣಿಯ ಪ್ರದೇಶವಾಗಿರುವ ಶಾಂತಳ್ಳಿ ವ್ಯಾಪ್ತಿಯಲ್ಲಿ ಕಾಫಿ ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾಫಿಯೊಂದಿಗೆ ಏಲಕ್ಕಿ ಬೆಳೆಗೂ ಕೊಳೆರೋಗ ಬಾಧಿಸಿದೆ.
ಪ್ರಸಕ್ತ ವರ್ಷದ ಹೂ ಮಳೆ ವಿಳಂಬವಾದ್ದರಿಂದ ಅನೇಕ ಕೃಷಿಕರು ಬೋರ್‍ವೆಲ್, ಕೆರೆ, ಹೊಳೆಗಳಿಂದ ಕಾಫಿ ತೋಟಕ್ಕೆ ನೀರು ಹಾಯಿಸಿ, ಕಾಫಿ ಗಿಡಗಳಲ್ಲಿ ಹೂ ಬಿಡುವಂತೆ ಮಾಡಿದ್ದರು. ಅದಾದ ನಂತರ ಕಾಫಿ ಕಾಯಿ ಬಿಡುವ ಸಂದರ್ಭವೂ ನೀರು ಹಾಯಿಸಿದ್ದರಿಂದ ಉತ್ತಮವಾಗಿ ಫಸಲು ಮೂಡಿತ್ತು.
ಜೂನ್‍ನಲ್ಲಿ ಅಲ್ಪ ಮಳೆಯಾದ ಹಿನ್ನೆಲೆ ಕಾಫಿ ತೋಟ ಉತ್ತಮ ಸ್ಥಿತಿಯಲ್ಲಿತ್ತು. ಜುಲೈನಲ್ಲಿ ಆಗಾಗ್ಗೆ ಬಿಡುವು ನೀಡಿ ಸುರಿದ ಮಳೆಯಿಂದಾಗಿ ಕಾಫಿ ಕಾಯಿಗಳು ಬಲಿಯಲಾರಂಭಿಸಿದ್ದವು. ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಆಗಸ್ಟ್ ಮೊದಲ ಹಾಗೂ ಎರಡನೇ ವಾರ ಸುರಿದ ಭಾರೀ ಮಳೆ ಸಮಸ್ಯೆ ತಂದೊಡ್ಡಿದ್ದು, ಕಾಫಿಗೆ ಬಾಧಿಸಿದ ಕೊಳೆರೋಗ ಬೆಳೆಗಾರರ ಸಂಕಷ್ಟಕ್ಕೂ ಕಾರಣವಾಗಿದೆ.
ಇದೀಗ ಪ್ರತಿಯೊಂದು ಕಾಫಿಗಿಡಗಳಲ್ಲೂ ಸುಮಾರು ಅರ್ಧ ಕೆ.ಜಿ.ಯಷ್ಟು ಕಾಫಿಕಾಯಿಗಳು ಕೊಳೆರೋಗಕ್ಕೆ ತುತ್ತಾಗಿದ್ದು, ಪ್ರಸ್ತುತ ಬಿಸಿಲಿನ ವಾತಾವರಣ ಇರುವದ ರಿಂದ ಅಲ್ಪಮಟ್ಟಿಗೆ ಕೊಳೆರೋಗಕ್ಕೆ ತಡೆಬಿದ್ದಿದೆ. ಒಂದೊಮ್ಮೆ ಮತ್ತೆ ಮಳೆ ಪ್ರಾರಂಭವಾದರೆ ಕೊಳೆರೋಗ ಇನ್ನಷ್ಟು ವ್ಯಾಪಿಸಲಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಅಭಿಪ್ರಾಯಿಸಿದ್ದಾರೆ.
-ವಿಜಯ್ ಹಾನಗಲ್