ವೀರಾಜಪೇಟೆ, ಆ. 19: ಗೋಣಿಕೊಪ್ಪದಲ್ಲಿ ಕೀರೆ ಹೊಳೆಯ ಪ್ರವಾಹದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಸರ್ಕಾರ ಸಂತ್ರಸ್ತ ನೈಜ ಫಲಾನುಭವಿಗಳನ್ನು ಗುರುತಿಸಿ ಪರಿಹಾರ ನೀಡಲು ವಿಫಲಗೊಂಡಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ ರಾಜ್ಯ ಸಮಿತಿ ಉಪಾಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಆರೋಪಿಸಿದ್ದಾರೆ.
ವೀರಾಜಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂತಿ ಅಚ್ಚಪ್ಪ ಅವರು ಈ ಬಾರಿ ಸುರಿದ ಭಾರೀ ಮಳೆಗೆ ಕೀರೆ ಹೊಳೆ ಉಕ್ಕಿ ಹರಿದು 350 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು 54 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. ಗೋಣಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಧಿಕಾರಿಗಳು ನೈಜ ಫಲಾನುಭವಿಗಳನ್ನು ಗುರುತಿಸದೆ ಪ್ರಭಾವಕ್ಕೊಳಗಾಗಿ ತಮಗೆ ಇಷ್ಟ ಬಂದ ಸಂತ್ರಸ್ತರಿಗೆ ಆಹಾರದ ಪರಿಹಾರದ ಕಿಟ್ಗಳನ್ನು ವಿತರಿಸಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷೆ ಕುಸುಮಾವತಿ ಮಾತನಾಡಿ ಪ್ರವಾಹದಿಂದ ಗೋಣಿಕೊಪ್ಪದ 6ನೇ ವಾರ್ಡ್ನಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿ ದೂರು ನೀಡಿದರೂ ಯಾವದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿಲ್ಲ ಎಂದು ದೂರಿದರು.