ಮಡಿಕೇರಿ, ಆ.19: ನಾಪೋಕ್ಲು ಸಮೀಪದ ಚೆರಿಯಪರಂಬು ಗ್ರಾಮದಲ್ಲಿ ಕಾವೇರಿ ನದಿ ದಡದ ಸರ್ಕಾರಿ ಪೈಸಾರಿ ಜಾಗವನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಹಲವು ಕುಟುಂಬಗಳು ವಾಸಿಸುತ್ತಿವೆ ಎಂದು ಆರೋಪಿಸಿರುವ ಒತ್ತುವರಿ ತೆರವು ಹೋರಾಟ ಸಮಿತಿ ಪ್ರತಿವರ್ಷ ಪ್ರವಾಹದಿಂದ ಅತಂತ್ರ ಪರಿಸ್ಥಿತಿ ಎದುರಿಸುವದನ್ನು ತಪ್ಪಿಸಲು ಒತ್ತುವರಿದಾರರನ್ನು ತೆರವುಗೊಳಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಪ್ರಮುಖರಾದ ಕೆ.ಎ.ಹ್ಯಾರಿಸ್, ಹೆಚ್.ಎಂ.ಟಿ.ಹಂಸ, ಟಿ.ಕೆ.ರಾಜ ಹಾಗೂ ಟಿ.ಕೆ.ಸುಶೀಲಮ್ಮ ನದಿ ದಡದಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ಮನೆ ಮತ್ತು ಗುಡಿಸಲುಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಹಲವರು ಮನೆಗಳನ್ನು ಬಾಡಿಗೆಗೆ ಕೂಡ ನೀಡಿದ್ದಾರೆ. ಕೆಲವರು 10-15 ಸೆಂಟ್‍ಗೂ ಅಧಿಕ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿಂದೆ ಅಧಿಕಾರಿಗಳು ಕೇವಲ 17 ಜನರ ವಿರುದ್ಧ ಸರಕಾರಿ ಜಾಗ ಅಕ್ರಮ ಒತ್ತುವರಿ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರೂ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಇದೇ ಕಾರಣದಿಂದ ಪ್ರತಿವರ್ಷ ಪ್ರವಾಹದಲ್ಲಿ ಸಿಲುಕುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವದೇ ಆಡಳಿತ ವ್ಯವಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.
ಪ್ರವಾಹ ಬಂದಾಗ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿ, ನಂತರ ಪರಿಹಾರ ಕೊಟ್ಟು ಕಳುಹಿಸುವದೇ ವಾಡಿಕೆಯಾಗಿ ಬಿಟ್ಟಿದೆ. ಮುಂದಿನ ವರ್ಷಗಳಲ್ಲಿ ಇದೇ ರೀತಿ ಪ್ರವಾಹ ಪರಿಸ್ಥಿತಿ ಎದುರಾದರೆ ಜೀವಹಾನಿಯೂ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಪ್ರಮುಖರು, ಅನಾಹುತ ಸಂಭವಿಸುವ ಮೊದಲು ನದಿ ದಡದ ನಿವಾಸಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಹೊರ ಊರುಗಳಿಂದ ಬಂದವರು ಅನೇಕ ಮಂದಿ ಇಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡಿದ್ದು, ಈ ಮಾಹಿತಿ ಪ್ರವಾಹ ಬಂದಾಗ ಬಹಿರಂಗಗೊಂಡಿದೆ. ಲಭ್ಯವಿರುವ ಸುರಕ್ಷಿತ ಪ್ರದೇಶದ ಪೈಸಾರಿ ಜಾಗವನ್ನು ಆಯಾ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಬೇಕು ಮತ್ತು ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.