ಕುಶಾಲನಗರ, ಆ. 19: ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಅಶ್ರಯದಲ್ಲಿ ಕುಶಾಲ ನಗರದಲ್ಲಿ ಜೀವನದಿ ಕಾವೇರಿಗೆ 97ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದ ಆರತಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕ ಕೃಷ್ಣಮೂರ್ತಿಭಟ್ ಪೂಜಾ ವಿಧಿ ನೆರವೇರಿಸಿದರು. ಅಷ್ಟೋತ್ತರ, ಮಹಾಮಂಗಳಾರತಿ ಬಳಿಕ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.

ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ನದಿ ತಟಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರಕಾರ ಮುಂದಾಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನದಿ ವಿಕೋಪದಿಂದ ಹಲವರು ಸಂತ್ರಸ್ತ ರಾಗುತ್ತಿರುವದು ವಿಷಾದನೀಯ. ನದಿಯ ಹೂಳೆತ್ತುವದರೊಂದಿಗೆ ನದಿ ಸಂರಕ್ಷಣೆಗೆ ವಿಶೇಷ ಕಾನೂನು ರಚನೆ ಅಗತ್ಯವಿದೆ. ಕಾವೇರಿ ನದಿ ಉಕ್ಕಿ ಹರಿಯುವ ಹಿನೆÀ್ನಲೆಯಲ್ಲಿ ಜಿಲ್ಲೆಯಲ್ಲಿ ನದಿ ತಟದ ನಾಗರಿಕರಿಗೆ, ಬೆಳೆಗಾರರಿಗೆ ಉಂಟಾಗುತ್ತಿರುವ ಸಮಸ್ಯೆಯ ಶಾಶ್ವತ ನಿವಾರಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಬಳಿ ನಿಯೋಗ ತೆರಳಿ ಯೋಜನೆ ರೂಪಿಸುವಂತೆ ಒತ್ತಾಯಿಸ ಲಾಗುವದು ಎಂದರು.

ಇದೇ ಸಂದರ್ಭ ರಕ್ಷಾಬಂಧನ ಅಂಗವಾಗಿ ಬಳಗದ ಪ್ರಮುಖರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು.

ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ, ಬಿ.ಜೆ.ಅಣ್ಣಯ್ಯ, ಮಂಡೇಪಂಡ ಬೋಸ್ ಮೊಣ್ಣಪ್ಪ, ರವೀಶ್ ಮತ್ತಿತರರು ಇದ್ದರು.