ಸಿದ್ದಾಪುರ, ಆ. 18: ಶಾಶ್ವತ ಸೂರು ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಗುಹ್ಯ ಗ್ರಾಮದ ಸಂತ್ರಸ್ತರು ಪರಿಹಾರ ಕೇಂದ್ರದಲ್ಲೇ ಪ್ರತಿಭಟನೆ ನಡೆಸಿ ಧರಣಿ ಕುಳಿತರು. ಈ ಬಾರಿಯ ಮಹಾಮಳೆಗೆ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ಗುಹ್ಯ, ಕಕ್ಕಟ್ಟುಕಾಡು, ಕೂಡುಗದ್ದೆ ಭಾಗದಲ್ಲಿ ನೂರಾರು ಮನೆಗಳು ಹಾನಿಯಾಗಿದ್ದು, 50ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಸಿದ್ದಾಪುರದ ಬಿ.ಜಿ.ಎಸ್. ಶಾಲೆಯಲ್ಲಿ ಪರಿಹಾರ ಕೇಂದ್ರದಲ್ಲಿ ನೂರಾರು ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಈ ಕುಟುಂಬಗಳಿಗೆ ಸರ್ಕಾರ ನೀಡುವ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಸೂರು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಮಹಿಳೆಯರು ಸೇರಿದಂತೆ ಸಂತ್ರಸ್ತರೆಲ್ಲರೂ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ ಹಾಗೂ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಸಂತ್ರಸ್ತರ ಬೇಡಿಕೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮನೆ ಕುಸಿತಗೊಂಡು ಹಾನಿಯಾದ ಸಂತ್ರಸ್ತ ಪಿ.ಕೆ. ಚಂದ್ರನ್ ಮಾತನಾಡಿ, ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ರೆಜಿತ್ ಕುಮಾರ್ ಮಾತನಾಡಿ, ಗುಹ್ಯ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ಮಂದಿ ಸಂತ್ರಸ್ತರಿಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಜಿಲ್ಲಾಡಳಿತದ ವತಿಯಿಂದ ತ್ವರಿತವಾಗಿ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.

ಸಂತ್ರಸ್ತರ ಬೇಡಿಕೆಗಳನ್ನು ಆಲಿಸಿದ ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, ಸಂತ್ರಸ್ತರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆಯಿತ್ತರು.

ಈ ಸಂದರ್ಭ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ನಾಗೇಶ್‍ರಾವ್, ಗ್ರಾಮಲೆಕ್ಕಿಗರಾದ ಓಮಪ್ಪ ಬಣಕಾರ್, ಅನುಶ್ ಹಾಗೂ ಕಂದಾಯ ಇಲಾಖಾಧಿಕಾರಿಗಳು, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

-ವಾಸು.