ಮಡಿಕೇರಿ, ಆ. 18: ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿರುವ ಕಕ್ಕಬ್ಬೆಯ ನಾಲ್ಕುನಾಡು ಅರಮನೆ ಹಾಗೂ ತಡಿಯಂಡಮೋಳ್ ಬೆಟ್ಟಕ್ಕೆ ನಿತ್ಯ ಪ್ರವಾಸಿಗರು ಆಗಮಿಸುತ್ತಿದ್ದು; ಇಂತಹ ತಾಣದ ಅರಮನೆಯನ್ನು ಸರಿಯಾಗಿ ನಿರ್ವಹಿಸದೆ ಸರಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾಚ್ಯವಸ್ತು ಇಲಾಖೆಯ ಅಧೀನವಿರುವ ಅರಮನೆಯ ಅವ್ಯವಸ್ಥೆ ಬಗ್ಗೆ ಖುದ್ದಾಗಿ ಅಧಿಕಾರಿ ರೇಖಾ ಬಳಿ ಗಮನ ಸೆಳೆದಿದ್ದರೂ; ಯಾವದೇ ಕ್ರಮ ಕೈಗೊಳ್ಳದೆ ನಿರ್ವಹಣೆಯ ಹಣದೊಂದಿಗೆ; ಪ್ರವಾಸೋದ್ಯಮ ಇಲಾಖೆಯಿಂದಲೂ ಸಾಕಷ್ಟು ಅನುದಾನ ದುರ್ಬಳಕೆಯಾಗಿರುವ ಶಂಕೆ ಇದೆ ಎಂದು ಟೀಕಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಾಲ್ಕುನಾಡು ಅರಮನೆ ಅಭಿವೃದ್ಧಿಗೆ ಸರಕಾರದಿಂದ ಬಿಡುಗಡೆಗೊಂಡಿರುವ ಹಣವನ್ನು ಯಾವ ರೀತಿ ಬಳಕೆ ಮಾಡಲಾಗಿದೆ ಎಂದು ತನಿಖೆಗೆ ಆದೇಶಿಸುವಂತೆ ತಾ.ಪಂ. ಉಪಾಧ್ಯಕ್ಷರು; ಅಲ್ಲಿನ ಗ್ರಾ.ಪಂ. ಅಧ್ಯಕ್ಷೆ ಶೈಲಾ ಕುಟ್ಟಪ್ಪ ಮತ್ತು ಗ್ರಾಮಸ್ಥರಾದ ಮನು ಮಹೇಶ್, ಕುಡಿಯರ ಮುತ್ತಪ್ಪ ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಹೇಳಿಕೆ ನೀಡಿರುವ ಅವರುಗಳು; ಈಗಾಗಲೇ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಗಮನ ಸೆಳೆದು; ಸರಕಾರದಿಂದ ಅರಮನೆ ರಕ್ಷಣೆಗೆ ವಿಶೇಷ ಅನುದಾನಕ್ಕೆ ಕೋರಿರುವದಾಗಿ ತಿಳಿಸಿದ್ದಾರೆ. ಪ್ರಸಕ್ತ ಅರಮನೆಯ ದ್ವಾರ ಬಳಿ ಕುಸಿಯುವದರೊಂದಿಗೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು; ನಿರ್ವಹಣೆಯಿಲ್ಲದೆ ಅರಮನೆಯೂ ಬೀಳುವ ಸ್ಥಿತಿಯಲ್ಲಿ ಇದೆ ಎಂದು ಟೀಕಿಸಿದ್ದಾರೆ.

ಅರಮನೆ ಹಿನ್ನೆಲೆ : ತಡಿಯಂಡಮೋಳ್ ಬೆಟ್ಟ ತಪ್ಪಲಿನ ದಟ್ಟ ಅಡವಿಯ ನಡುವೆ ಸುರಕ್ಷಿತವಾಗಿ ಉಳಿದುಕೊಳ್ಳಲು ಕೊಡಗಿನ ದೊಡ್ಡ ವೀರರಾಜೇಂದ್ರ ಅವರು 1792ರಲ್ಲಿ ಈ ಅರಮನೆಯನ್ನು ಅತ್ಯಂತ ಸುಂದರ ರೀತಿಯಲ್ಲಿ ನಿರ್ಮಿಸಿದ್ದಾಗಿದೆ. ಮಾತ್ರವಲ್ಲದೆ ಮರದಿಂದ ನಾಜೂಕು ಕೆತ್ತನೆಯ ಕಂಬಗಳೊಂದಿಗೆ; ಅತ್ಯುತ್ತಮ ರೀತಿಯಲ್ಲಿ ಈ ಸುಂದರ ಮನೆ ನಿರ್ಮಿಸಿ; ತೈಲವರ್ಣದಿಂದ ಆ ಕಾಲದಲ್ಲಿ ಸಂಪೂರ್ಣ ಒಳಾಂಗಣ ಗೋಡೆಗಳು ಹಾಗೂ ಮೇಲ್ಚಾವಣಿಗೆ ಚಿತ್ರಗಳನ್ನು ರಚಿಸಿದ್ದಾಗಿದೆ. ಈ ಅರಮನೆಯ ಮೋಹಕ ಶೈಲಿ ಹಾಗೂ ‘ದರ್ಬಾರ್’ ಸಭಾಂಗಣದೊಂದಿಗೆ ಎರಡು ಅಂತಸ್ತಿನ ಕಟ್ಟಡ ಆಕರ್ಷಣೀಯವಾಗಿ ರೂಪುಗೊಂಡಿದ್ದಾಗಿದೆ.

1834ರಲ್ಲಿ ರಾಜಪರಂಪರೆಯ ಚಿಕ್ಕವೀರರಾಜೇಂದ್ರ ತಾನು ಅಂತಿಮವಾಗಿ ವಾಸವಿದ್ದು; ಬ್ರಿಟಿಷರು ಆತನನ್ನು ಈ ಅರಮನೆಯಲ್ಲಿ ಅಡಗಿದ್ದಾಗಲೇ ಸೆರೆ ಹಿಡಿದು ಗಡಿಪಾರುಗೊಳಿಸಿದ್ದಾಗಿ ಇತಿಹಾಸದಿಂದ ತಿಳಿದು ಬರುತ್ತದೆ. ಈ ಅರಮನೆ ಪಕ್ಕದಲ್ಲೇ ಐತಿಹಾಸಿಕ ಕಲಶ ಗೋಪುರ ಸಹಿತ ಮಡಿಕೇರಿಯ ರಾಜಗದ್ದುಗೆಯಂತೆ ಕಿರಿದಾದ ಕಟ್ಟಡವೊಂದಿದೆ. ಪ್ರಸಕ್ತ ಹಳೆಯ ಕಾಲದ ಮಣ್ಣಿನ ನೆಲದಿಂದ ಕೂಡಿರುವ ಅರಮನೆ ನಿರ್ಲಕ್ಷ್ಯಕ್ಕೆ ಒಳಗಾಗಿರುವದು ದುರಂತ.

ಹೀಗಾಗಿ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ದಿಸೆಯಲ್ಲಿ ಇಂತಹ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಅಗತ್ಯವೆಂದು ಒತ್ತಾಯಿಸಿರುವ ಪ್ರಮುಖರು; ಶಾಸಕ ಕೆ.ಜಿ. ಬೋಪಯ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆದು ಅರಮನೆಗೆ ಕಾಯಕಲ್ಪಕ್ಕೆ ಮುಂದಾಗುವಂತೆ ಮನವಿ ಮಾಡಿದ್ದಾರೆ.