ಚೆಟ್ಟಳ್ಳಿ,ಆ. 18: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ನದಿಯ ಪ್ರವಾಹ ದಿಂದ ಬಹುತೇಕ ಬಡ ಕುಟುಂಬಗಳು ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿ ಪರಿಹಾರ ಕೇಂದ್ರಗಳಲ್ಲಿ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದ್ದು ಸರ್ಕಾರವು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೋಹಿನ್ ಆರೋಪಿಸಿದ್ದಾರೆ.

ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆ ವತಿಯಿಂದ ರಕ್ಷಣಾ ಕಾರ್ಯ ಹಾಗೂ ತುರ್ತು ಪರಿಹಾರ ವಿತರಣಾ ಕಾರ್ಯದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿ ನದಿ ದಡಗಳಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳೇ ವಾಸಿಸುತ್ತಿದ್ದು, ಪ್ರತಿ ಬಾರಿಯೂ ಪ್ರವಾಹ ಸಂದರ್ಭದಲ್ಲಿ ತಮ್ಮ ಆಸ್ತಿ ಪಾಸ್ತಿ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಶಾಶ್ವತ ಸೂರು ಕಲ್ಪಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ನದಿ ದಡದ ನಿವಾಸಿಗಳ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ.

ಸಂಕಷ್ಟಕ್ಕೊಳಗಾಗುತ್ತಿರುವ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳ ಸ್ಪಂದನವೂ ಇಲ್ಲವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಹಲವೆಡೆ ಪೈಸಾರಿ ಜಾಗಗಳು ಒತ್ತುವರಿಯಾಗಿದ್ದರೂ ಇದನ್ನು ಬಿಡಿಸಿ ಕಡುಬಡ ಕುಟುಂಬಗಳಿಗೆ ವಿತರಿಸುವಲ್ಲಿ ಜಿಲ್ಲಾಡಳಿತವೂ ಮೌನವಾಗಿದೆ. ಮಹಾ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರೂ. 25 ಲಕ್ಷ ಪರಿಹಾರ ಹಾಗೂ ಮನೆ ಕಳೆದು ಕೊಂಡ ಕುಟುಂಬಗಳಿಗೆ ಶಾಶ್ವತ ಯೋಜನೆ ರೂಪಿಸಿ ಪುನರ್ವಸತಿ ಕಲ್ಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಮಾತನಾಡಿ, ಪಿಎಫ್‍ಐ ಹಾಗೂ ಎಸ್‍ಡಿಪಿಐ ರೆಸ್ಕ್ಯೂ ಮತ್ತು ರಿಲೀಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಹಾಗೂ ನೀರಿಗೆ ಕೊಚ್ಚಿ ಹೋಗುತ್ತಿದ್ದ ವಸ್ತುಗಳನ್ನು ವಾರಸು ದಾರರಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ತುರ್ತು ಪರಿಹಾರಗಳನ್ನು ವಿತರಣೆ ಮಾಡಲಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಕಷ್ಟಕ್ಕೊಳ ಗಾಗಿರುವ ಜನರ ಕಣ್ಣೀರಿಗೆ ಸ್ವಂದಿಸಲು ದಾನಿಗಳು ನಮ್ಮೊಂದಿಗೆ ಕೈಜೋಡಿಸಿ ದ್ದಲ್ಲಿ ಸಂತ್ರಸ್ತರಿಗೆ ಸ್ವಂದಿಸುವ ಕೆಲಸವಾಗಲಿದೆ ಎಂದರು.

ಈ ಸಂದರ್ಭ ಪ್ರಮುಖರಾದ ಅಬ್ದುಲ್ಲ ಅಡ್ಕರ್, ಪೀಟರ್, ಮನ್ಸೂರ್, ಇಬ್ರಾಹಿಂ ಮತ್ತಿತರರು ಇದ್ದರು.