ಮಡಿಕೇರಿ, ಆ. 18 : ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಕ್ಲಬ್ ಮಹೀಂದ್ರ ಹಾಗೂ ಕೂರ್ಗ್ ಕ್ಲೀನ್ ಸಂಘಟನೆಯ ಸಹಯೋಗದಲ್ಲಿ ಸ್ವಚ್ಛತೆಯ ಜಾಗೃತಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ವೀರಾಜಪೇಟೆಯಿಂದ ಕರಡ ಗ್ರಾಮದವರೆಗಿನ 15 ಕಿ.ಮೀ. ಸೈಕಲ್ ಜಾಥಾಕ್ಕೆ ರೋಟರಿ ವಲಯ 6ರ ಕಾರ್ಯದರ್ಶಿ ಅನಿಲ್ ಎಚ್.ಟಿ. ವೀರಾಜಪೇಟೆಯಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು. ಸ್ವಚ್ಛ ದೇಶ, ಸ್ವಚ್ಛ ಸಮಾಜದ ಯೋಜನೆ ದೇಶವ್ಯಾಪಿ ಕ್ರಾಂತಿಯಂತಾಗಿದ್ದು, ವೀರಾಜಪೇಟೆ ರೋಟರಿ ಸೈಕಲ್ ಜಾಥಾದ ಮೂಲಕ ಈ ಸಂದೇಶವನ್ನು ವಿನೂತನವಾಗಿ ಸಾರುತ್ತಿರುವದು ಶ್ಲಾಘನೀಯ ಎಂದು ಅನಿಲ್ ಹೇಳಿದರು.
ವೀರಾಜಪೇಟೆ ರೋಟರಿ ಜೋನಲ್ ಲೆಫ್ಟಿನೆಂಟ್ ಡಾ. ಎಸ್.ವಿ. ನರಸಿಂಹನ್ ಮಾತನಾಡಿ, ಸ್ವಚ್ಛತೆಯ ಜಾಗೃತಿ ಪ್ರತಿಯೋರ್ವರಲ್ಲಿಯೂ ಸದಾ ಕಾಲ ಇರುವಂತಾಗಬೇಕು ಎಂದರು.
ಕೂರ್ಗ್ ಕ್ಲೀನ್ ಸಂಸ್ಥೆಯ ಬಡುವಂಡ ಅರುಣ್ ಅಪ್ಪಚ್ಚು ಮಾಹಿತಿ ನೀಡಿ, 24 ಸೈಕಲಿಸ್ಟ್‍ಗಳು ವೀರಾಜಪೇಟೆಯಿಂದ ಕದನೂರು ಗ್ರಾಮಕ್ಕಾಗಿ ಕ್ಲಬ್ ಮಹೀಂದ್ರದವರೆಗೆ ಸೈಕಲಿಂಗ್ ಜಾಥಾ ನಡೆಸುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಸೈಕಲ್ ಜಾಥಾದ ಮೂಲಕ ತಿಳುವಳಿಕೆ ಮೂಡಿಸುವ ಪ್ರಯತ್ನ ಇದಾಗಿದೆ. ನನ್ನ ಕಸ - ನನ್ನ ಹೊಣೆ ಎಂಬದು ಪ್ರತಿಯೋರ್ವನ ಮನಸ್ಸಿನಲ್ಲಿ ತಾನಾಗಿಯೇ ಮೂಡಿದರೆ ಸ್ವಚ್ಛ ಸಮಾಜದ ಪರಿಕಲ್ಪನೆ ಸುಲಭವಾಗಿ ಈಡೇರುತ್ತದೆ ಎಂದರು.
ಕ್ಲೀನ್ ಕೂರ್ಗ್ ಸಂಘಟನೆಯ ಸಂಚಾಲಕ ಪ್ರಶಾಂತ್ ಮಾತನಾಡಿ, ಕೊಡಗು ತನ್ನ ಪ್ರಾಕೃತಿಕ ಸಂಪತ್ತನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದು, ಇನ್ನೂ ಎಚ್ಚರಗೊಳ್ಳದೇ ಹೋದಲ್ಲಿ ಮುಂದಿನ ಪೀಳಿಗೆಗೆ ಮಾತ್ರವಲ್ಲ ಈಗಿರುವ ಜನರಿಗೇ ಪ್ರಕೃತಿಯ ಸಂಪನ್ಮೂಲ ದೊರಕುವದಿಲ್ಲ ಎಂದು ಎಚ್ಚರಿಸಿದರು.
ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಚ್. ಆದಿತ್ಯ ಮಾತನಾಡಿ, ವೀರಾಜಪೇಟೆ ಮತ್ತು ಈ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯತೆ ಗಮನಿಸಿ ಬೀ ಕ್ಲೀನ್ - ಬೀ ಗ್ರೀನ್ ಎಂಬ ಸಂದೇಶ ಹೊತ್ತ ಸೈಕಲ್ ಜಾಥಾದ ಮೂಲಕ ಸ್ವಚ್ಛತೆಯ ತಿಳುವಳಿಕೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ವೀರಾಜಪೇಟೆ ರೋಟರಿಯಿಂದ ಪರಿಸರ ಜಾಗೃತಿ ಸಂಬಂಧಿತ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಕ್ಲಬ್ ಮಹೀಂದ್ರ ರೆಸಾರ್ಟ್ ಮ್ಯಾನೇಜರ್ ಜಿಷ್ಣು ಉಣ್ಣಿ ಮಾತನಾಡಿ, ಕ್ಲಬ್ ಮಹೀಂದ್ರದ ಸಾಮಾಜಿಕ ಸೇವಾ ಯೋಜನೆಯಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಸೈಕಲ್ ಜಾಥಾದಂಥ ಪರಿಸರ ಸ್ನೇಹಿ ಯೋಜನೆಗೆ ಸಹಯೋಗ ನೀಡಿರುವದು ಹೆಮ್ಮೆ ತಂದಿದೆ ಎಂದರು. ವೀರಾಜಪೇಟೆ ರೋಟರಿ ಕಾರ್ಯದರ್ಶಿ ಭರತ್ ರಾಮ್‍ರೈ, ರೋಟರಿ ಸದಸ್ಯರು ಹಾಜರಿದ್ದರು.