ಕುಶಾಲನಗರ, ಆ. 18: ಕುಶಾಲನಗರದಿಂದ ಗೊಂದಿಬಸವನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ದುರಸ್ತಿಗೀಡಾಗಿದೆ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಬಿ. ಜಗದೀಶ್ ಹೇಳಿದ್ದಾರೆ.
ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಮೂರು ವರ್ಷಗಳಿಂದ ಎರಡು ಬಾರಿ ಭೂಮಿ ಪೂಜೆ ನೆರವೇರಿಸಿದ ಜನಪ್ರತಿನಿಧಿಗಳು ಕಾಮಗಾರಿ ಬಗ್ಗೆ ಗಮನಹರಿಸದಿರುವದೇ ಈ ಅವಾಂತರಕ್ಕೆ ಕಾರಣ ಎಂದಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಗುದ್ದಲಿ ಪೂಜೆ ಮಾಡುವಾಗ ಈ ರಸ್ತೆಗೆ 85 ಲಕ್ಷ ರೂಪಾಯಿ ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದರು.
ಆದರೆ ಯಾವದೇ ರೀತಿಯ ಬೆಳವಣಿಗೆ ಕಂಡುಬಂದಿಲ್ಲ ಎಂದಿರುವ ಜಗದೀಶ್, ಗೊಂದಿಬಸವನಹಳ್ಳಿಯಿಂದ ಕುಶಾಲನಗರಕ್ಕೆ ನೂರಾರು ಮಕ್ಕಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಯಾವದೇ ವಾಹನಗಳು ರಸ್ತೆಯಲ್ಲಿ ಬರಲು ಹಿಂಜರಿಯುತ್ತಿರುವದರಿಂದ ಜನರಿಗೆ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯುಂಟಾಗುತ್ತಿದೆ ಎಂದರು.
ಸದಸ್ಯ ಹರೀಶ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗೊಂದಿಬಸವನಹಳ್ಳಿ- ಕುಶಾಲನಗರ ಸಂಪರ್ಕ ರಸ್ತೆ ಸುಮಾರು 4 ಕಿಲೋಮೀಟರ್ ಉದ್ದದ ರಸ್ತೆಯಾಗಿದ್ದು, ತಕ್ಷಣ ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ತಾ. 20ರಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ತಡೆದು, ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದು ನೀರು ನಿಂತಿರುವ ಸ್ಥಳದಲ್ಲಿ ಬಾಳೆ ಗಿಡಗಳ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವದು. ಈ ಪ್ರತಿಭಟನೆಯಲ್ಲಿ ಗೊಂದಿಬಸವನಹಳ್ಳಿ ಗ್ರಾಮಸ್ಥರು, ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಗೆ ಸೇರಿದ ಬಡಾವಣೆಗಳ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಎಂ.ಕೆ. ದಿನೇಶ್, ನಾಗೇಗೌಡ ಬಡಾವಣೆಯ ನಿವಾಸಿ ಎನ್. ಲಿಂಗಮ್ ಇದ್ದರು.