ಭಾಗಮಂಡಲ, ಆ. 18: ಪವಿತ್ರ ಕ್ಷೇತ್ರ ತಲಕಾವೇರಿಯ ಜಲಮೂಲದ ನೆಲೆಯಾಗಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಇಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಇಬ್ಬರು ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಬಾರಿಯ ಮಳೆಯ ಆರ್ಭಟಕ್ಕೆ ಬ್ರಹ್ಮಗಿರಿ ಬೆಟ್ಟದ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಕುರಿತು ‘ಶಕ್ತಿ’ಯಲ್ಲಿ ಇಂದು ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಇವರುಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಈ ಕುರಿತಾದ ಅಧ್ಯಯನ ವರದಿಯನ್ನು, ಬಳಿಕ ಜಿಲ್ಲಾಡಳಿತಕ್ಕೆ ಸಲ್ಲಿಸಲಿರುವದಾಗಿ ವಿಜ್ಞಾನಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಈ ವಿಜ್ಞಾನಿಗಳು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ ಮೇರೆಗೆ ಇಂದು ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಮಾಹಿತಿ ಕಲೆಹಾಕಿ ಹಿಂತೆರಳಿದ್ದಾರೆ.

-ಸುನಿಲ್.