ಮಡಿಕೇರಿ, ಆ. 18: ಮಹಾಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿ ಇದೀಗ ಕೊಂಚ ತಿಳಿಯಾದಂತೆ ಭಾಸವಾಗುತ್ತಿದೆ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಎಲ್ಲೆಡೆ ಪ್ರವಾಹ ನುಗ್ಗಿ ಮನೆ, ಮಠಗಳು ಮುಳುಗಡೆಯಾಗಿ ನಷ್ಟ ಸಂಭವಿಸಿದರೆ; ಭೂಕುಸಿತವುಂಟಾಗಿ ಸಾವು - ನೋವುಗಳು ಕೂಡ ಸಂಭವಿಸಿದ್ದವು. ಇದೀಗ ಮಳೆ ಕಡಿಮೆಯಾಗುತ್ತಿದಂತೆ ಅಲ್ಲಲ್ಲಿ ಭೂಮಿ ಬಿರುಕುಬಿಟ್ಟಿರುವ ಘಟನೆಗಳು ಗೋಚರಿಸುತ್ತಿವೆ.ಕಾರುಗುಂದದಲ್ಲಿ ನಾಪಂಡ ಕುಟುಂಬದ ಐನ್‍ಮನೆ ಬಳಿ ಭಾರೀ ಗಾತ್ರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇತ್ತ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲೂ ಬಂಡೆಗಳ ನಡುವೆ ಬಿರುಕು ಬಿಟ್ಟಿದೆ. ಭಾಗಮಂಡಲ ವ್ಯಾಪ್ತಿಯ ಬ್ರಹ್ಮಗಿರಿ ಶ್ರೇಣಿಯ ಬೆಟ್ಟದಲ್ಲೂ ಭಾರೀ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇದರೊಂದಿಗೆ ಇದೀಗ ಮದೆನಾಡಿನಲ್ಲಿ ಕಾಫಿ ತೋಟದಲ್ಲಿ ಭಾರೀ ಗಾತ್ರದಲ್ಲಿ ಹೊಂಡವೊಂದು ಸೃಷ್ಟಿಯಾಗಿದೆ. ಹೊಂಡದೊಳಗೆ ಒಂದು ಕಾಫಿ ಗಿಡ, ಅಡಿಕೆ ಮರ ಹುದುಗಿ ಹೋಗಿದೆ. ಅಲ್ಲದೆ ಕಣ್ಣಿಗೆ ನಿಲುವಕಷ್ಟು ಆಳಕ್ಕೆ ಸುರಂಗ ಮಾದರಿಯಲ್ಲಿ ಹೊಂಡವಾಗಿದೆ. ಅಲ್ಲಿನ ನಿವಾಸಿ ಪಟ್ಟಡ ಲೋಬಯ್ಯ ಅವರ ಕಾಫಿ ತೋಟದಲ್ಲಿ ಈ ಬೃಹತ್ ಹೊಂಡ ಸೃಷ್ಟಿಯಾಗಿ ಅಚ್ಚರಿ ನಡುವೆ ಆತಂಕ ಮೂಡಿಸಿದೆ.
- ಪಟ್ಟಡ ದೀಕ್ಷಿ ಪ್ರಕಾಶ್