ಸಿದ್ದಾಪುರ, ಆ. 18: ಕೋಳಿ ಮಾಂಸದ ಅಂಗಡಿಯೊಂದರ ನಗದು ಪೆಟ್ಟಿಗೆಯಿಂದ ಹಣವನ್ನು ಎಗರಿಸಿದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ನೆಲ್ಯಹುದಿಕೇರಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶಿವದಾಸ್ ಎಂಬವರ ಕೋಳಿ ಮಾಂಸ ಮಾರಾಟದ ಅಂಗಡಿಯೊಂದಕ್ಕೆ ವ್ಯಕ್ತಿಯೋರ್ವ ಮಾಂಸ ಖರೀದಿಸಲು ಆಗಮಿಸಿದ್ದ ಈ ಸಂದರ್ಭದಲ್ಲಿ ರೂ. 8000ವನ್ನು ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.

ಶಿವದಾಸ್ ತಮ್ಮ ನಗದು ಪೆಟ್ಟಿಗೆಯಲ್ಲಿ ಹಣವನ್ನು ಪರಿಶೀಲಿಸಿದಾಗ ಹಣವು ಕಾಣೆಯಾಗಿತ್ತು. ಈ ಬಗ್ಗೆ ಶಿವದಾಸ್ ಅಂಗಡಿಯಲ್ಲಿ ಇಟ್ಟಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ವ್ಯಕ್ತಿಯೋರ್ವ ಹಣ ಕಳ್ಳತನ ಮಾಡಿರುವ ದೃಶ್ಯಾವಳಿಯು ಸೆರೆಯಾಗಿತ್ತು. ಈ ಬಗ್ಗೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಪರಿಶೀಲಿಸಿ ತನಿಖೆ ನಡೆಸಿದಾಗ ಆರೋಪಿಯು ಮೂಲತ: ತಮಿಳುನಾಡು ನಿವಾಸಿಯಾಗಿದ್ದು ಈತ ನೆಲ್ಯಹುದಿಕೇರಿಯ ಖಾಸಗಿ ತೋಟವೊಂದರ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡು ಕಾರ್ಮಿಕನಾಗಿರುವದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

-ವಾಸು