ಕಣಿವೆ, ಆ. 18: ಕಳೆದ ಒಂದು ವಾರದ ಹಿಂದಷ್ಟೇ ಏನೆಲ್ಲಾ ಅವಾಂತರಗಳನ್ನು ಆವಾಹಿಸಿದ ಆಶ್ಲೇಷಾ ಮಳೆ ಕೊಡಗು ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ- ಪಾಸ್ತಿಗಳನ್ನು ಹಾನಿ ಮಾಡಿದ ಆಶ್ಲೇಷಾ ಮಳೆಯ ಅವದಿ ಇದೀಗ ಮುಗಿದಿದೆ. ಹವಾಮಾನವೂ ಎಂದಿನಂತೆ ಮುಂದುವರೆದಿದೆ. ಆದರೆ ಆಶ್ಲೇಷಾ ಮಳೆ ಮಾಡಿ ಹೋದ ಆವಾಂತರಗಳಿಂದ ಆಸ್ತಿ ಪಾಸ್ತಿ ಕಳೆದುಕೊಂಡವರು ಅನುಭವಿಸುತ್ತಿರುವ ನೋವು, ಸಂಕಟ, ದುಗುಡಗಳು ಮಾತ್ರ ಹೇಳತೀರದ್ದು. ಭತ್ತದ ನಾಟಿ ಮಾಡಲು ರೈತರು ಸಿದ್ದಪಡಿಸಿದ್ದ ಸಸಿಮಡಿಗಳು ವಾರಗಟ್ಟಲೇ ಪ್ರವಾಹದ ನೀರು ಗದ್ದೆಗಳಲ್ಲಿ ನಿಂತಿದ್ದರಿಂದ ನೀರಿನಲ್ಲಿ ಕರಗಿ ಹಾಳಾಗಿವೆ.
ಗದ್ದೆಗಳಲ್ಲಿ ಮರಳು ಮಿಶ್ರಿತ ಮಣ್ಣು ಸಂಗ್ರಹಗೊಂಡು ಮತ್ತೆ ಉಳುಮೆ ಮಾಡಿ ಗದ್ದೆಗಳನ್ನು ಸಿದ್ಧಗೊಳಿಸುವ ಅನಿವಾರ್ಯತೆ ಎದುರಾಗಿದೆ. ಇನ್ನೂ ಕೈಗೆ ಬಂದಿದ್ದ ಮುಸುಕಿನ ಜೋಳದ ಫಸಲು ತುಂಬಿದ ಹೊಲ ಗದ್ದೆಗಳಲ್ಲಿ ಕಾವೇರಿ ನದಿ ಪ್ರವಾಹದ ನೀರು ಹದಿನೈದು ಅಡಿಗಳಿಗೂ ಹೆಚ್ಚು ನಿಲುಗಡೆಗೊಂಡಿದ್ದರಿಂದ ಜೋಳದ ಗೊನೆಗಳಲ್ಲಿ ತುಂಬಿದ್ದ ಕಾಳುಗಳು ಮೊಳಕೆ ಒಡೆಯುತ್ತಿವೆ.
2019ರ ಕ್ಯಾಲೆಂಡರ್‍ನಲ್ಲಿ ನಮೂದು ಆಗಿರುವಂತೆ 03-08-2019ರವರೆಗೆ ಶ್ರಾವಣ ಶುದ್ಧ ತೃತೀಯ ಶನಿವಾರ ಅಂದರೆ ಕಳೆದ 03-08-2019 ರಂದು ಮಧ್ಯಾಹ್ನ 3-17 ನಿಮಿಷದಲ್ಲಿ ವೃಶ್ಚಿಕ ಲಗ್ನದಲ್ಲಿ ಪ್ರವೇಶವಾಗಿದ್ದು, ಮಂಡೂಕ ವಾಹನವಾಗಿರುತ್ತದೆ. ಈ ಮಳೆ ಕರ್ನಾಟಕದ ಉತ್ತರ ಭಾಗಕ್ಕೆ ಮಾತ್ರ ಖಂಡ ಮಂಡಲವಾಗಿ ಸುರಿಯುತ್ತದೆ. ದಕ್ಷಿಣದ ಭಾಗಕ್ಕೆ ಹೋದಂತೆ ಉತ್ತಮದಿಂದ ಸ್ವಲ್ಪ ಹೆಚ್ಚೆನಿಸುವಷ್ಟು ಸುರಿಯುತ್ತದೆ. ಪೂರ್ವದ ಕಡೆಗೆ ಮಾತ್ರ ತುಂತುರಾಗಿ ಮಳೆಯಾಗುತ್ತದೆ. ಪಶ್ಚಿಮದಲ್ಲಿ ಮಾತ್ರ ಅನಾವೃಷ್ಟಿ ಆಗುತ್ತದೆ ಎಂದು ಬರೆದಿದ್ದ ಲಿಖಿತ ರೂಪದ ಭವಿಷ್ಯ ಸಿದ್ಧಿಸಿದೆ.
ಅಂದರೆ ಆಗಸ್ಟ್ ತಿಂಗಳ 5 ರಿಂದ 12, ಮತ್ತು 16 ಹಾಗೂ 17 ರವರೆಗೂ ಆಶ್ಲೇಷಾ ಮಳೆ ಸುರಿಯುತ್ತದೆ ಎಂದು ಅದರಲ್ಲಿ ಅಡಕವಾಗಿದ್ದು ನಿಜವಾಗಿದೆ.
ಅರಣ್ಯ ರೋದನ
ಮನೆಗಳನ್ನು ಕಳೆದುಕೊಂಡ ಜನರ ಗೋಳಂತೂ ಕೇಳುವ ಹಾಗೆಯೇ ಇಲ್ಲ. ಅದೊಂದು ರೀತಿಯ ಅರಣ್ಯ ರೋದನದಂತಿದೆ. ಕಳೆದ ವರ್ಷ ಹಾರಂಗಿಯ ಆರ್ಭಟದಿಂದ ರೋಸಿ ಹೋಗಿದ್ದ ಹಾರಂಗಿ ಹಾಗೂ ಕಾವೇರಿ ನದಿ ದಂಡೆಯ ತಗ್ಗು ಪ್ರದೇಶಗಳ ನೂರಾರು ಮಂದಿಯ ಅವಲಂಬಿತ ಸೂರುಗಳು ನೀರಿನಲ್ಲಿ ಮುಳುಗಿ ಆಗಿದ್ದ ನಷ್ಟದಿಂದ ನಲುಗಿದ್ದವರ ನೋವು ಮಾಸದ ಮುನ್ನವೇ ಮತ್ತೆ ಎರಗಿದ ಕಾವೇರಿ ನದಿ ಪ್ರವಾಹ ಗಾಯದ ಮೇಲೆ ಬರೆ ಎಳೆದಂತೆ ಮತ್ತಷ್ಟು ಸಂಕಟವನ್ನು ತಂದೊಡ್ಡಿದೆ.
ಸರ್ಕಾರವೇನೋ ಬೆಳೆಹಾನಿಗೊಳಗಾದ ರೈತರಿಗೆ ಎಕರೆಗೆ ತಲಾ 10 ಸಾವಿರ ರೂ.ಗಳ ಪರಿಹಾರದ ಚೆಕ್ ಹಾಗೂ ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಆದರೂ ಆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಸಿ ಕೊಡುವಲ್ಲಿ ನೆರೆ ನಿರಾಶ್ರಿತರು ಮತ್ತಷ್ಟು ಹೈರಾಣಾಗುವದರಲ್ಲಿ ಅನುಮಾನವೇ ಇಲ್ಲ.
ಇಲಾಖೆಗಳ ಸಂಬಂಧಿತ ಅಧಿಕಾರಿ, ಸಿಬ್ವಂದಿಗಳು ಸರ್ಕಾರದ ಸವಲತ್ತುಗಳನ್ನು ಪರಿಹಾರೋಪಾಯಗಳನ್ನು ಒದಗಿಸುವಾಗ ಕಾನೂನು ಕಟ್ಟಳೆಗಳ ಪುಸ್ತಕದಲ್ಲಿನ ಬದನೆ ಕಾಯಿ ನೋಡಿಯೇ ಮಾಡುವ ಕಾರಣ, ಹತ್ತು ಹಲವು ಪ್ರಶ್ನೆಗಳ ಗೋಜಲಿನಲ್ಲಿ ನೊಂದ ನಿರಾಶ್ರಿತರನ್ನು ಸಿಲುಕಿಸುವ ಸಂಭವವೇ ಹೆಚ್ಚಿದ್ದರೂ ಅಚ್ಚರಿಪಡಬೇಕಿಲ್ಲ...!
ಕಳೆದ ಬಾರಿಯ ಹಾರಂಗಿ ನದಿಯ ಮತ್ತು ಈ ಬಾರಿಯ ಕಾವೇರಿ ನದಿಯ ಪ್ರವಾಹಗಳಿಂದ ನೋವುಂಡ ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
- ಕೆ.ಎಸ್. ಮೂರ್ತಿ