ನಾಪೆÇೀಕ್ಲು, ಆ. 17: ಮಹಾ ಮಳೆಯ ಪ್ರವಾಹ ಇಳಿಮುಖಗೊಳ್ಳುತಿದ್ದಂತೆ ಮಳೆಯಿಂದ ಉಂಟಾದ ಕಷ್ಟ ನಷ್ಟಗಳು ಒಂದೊಂದಾಗಿ ಗೋಚರಿಸುತ್ತಿದೆ. ಪ್ರವಾಹ, ವಿದ್ಯುತ್, ನೆಟ್‍ವರ್ಕ್ ಇಲ್ಲದ ಕಾರಣ ಹೊರ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಪ್ರವಾಹ ಕಡಿಮೆಯಾಗುತ್ತಿದ್ದಂತೆ ಉಂಟಾದ ನಷ್ಟದಿಂದ ಜನ ಕಂಗಾಲಾಗಿದ್ದಾರೆ.

ಮುಳುಗಿದ ಮನೆ: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ವೆಸ್ಟ್ ಕೊಳಕೇರಿ ಗ್ರಾಮದ ಕೇಟೋಳಿರ ಶಮ್ಮಿ ಅಯ್ಯಪ್ಪ ಅವರ ಮನೆ ಎಂಟು ಅಡಿಗಳಷ್ಟು ನೀರಿನಲ್ಲಿ ಮುಳುಗಿತ್ತು. ಮನೆಯೊಳಗಿದ್ದ ಟಿ.ವಿ, ಫ್ರ್ರಿಜ್, ವಾಷಿಂಗ್ ಮೆಶಿನ್, ಲ್ಯಾಪ್ ಟಾಪ್ ಸೇರಿದಂತೆ ಪೀಠೋಪಕರಣಗಳು, ಬಟ್ಟೆ, ಬರೆ ಸೇರಿದಂತೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದರೊಂದಿಗೆ ಕೋಟೇರಿ ಹೊಳೆಗೆ ನೀರಿಗಾಗಿ ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ ಚೆಕ್ ಡ್ಯಾಮ್ ಕೊಚ್ಚಿ ಹೋಗಿರುವದು ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ ಎನ್ನುತ್ತಾರೆ ಶಮ್ಮಿ ಅಯ್ಯಪ್ಪ.

ಭೂ ಕುಸಿತ: ಈಸ್ಟ್ ಕೊಳಕೇರಿ ಗ್ರಾಮದಲ್ಲಿ ಉಂಟಾದ ಬಾರೀ ಭೂ ಕುಸಿತದಿಂದ ಗ್ರಾಮದ ಮಾಜಿ ಸೈನಿಕ ಪುಲ್ಲೇರ ಪಳಂಗಪ್ಪ ಸೇರಿದಂತೆ ಹಲವರಿಗೆ ನಷ್ಟ ಉಂಟಾಗಿದೆ. ಭೂ ಕುಸಿತದಿಂದ ಪಳಂಗಪ್ಪ ಅವರ ಸುಮಾರು 50ಕ್ಕೂ ಹೆಚ್ಚು ಕಾಳು ಮೆಣಸು ಬಳ್ಳಿಗಳು ಮರದ ಸಮೇತ ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಅದರೊಂದಿಗೆ ಕಾಫಿ, ಅಡಿಕೆ ತೋಟಗಳಿಗೂ ನಷ್ಟ ಉಂಟಾಗಿದೆ. ಭೂ ಕುಸಿತದ ಪರಿಣಾಮ ಪಕ್ಕದ ನಾಟಿ ಗದ್ದೆಗಳಿಗೆ ನೀರು ನುಗ್ಗಿ ಗದ್ದೆಗಳೂ ಕೂಡ ಮಣ್ಣಿನಿಂದ ಮುಚ್ಚಿ ಹೋಗಿದೆ. ತೋಡುಗಳಲ್ಲಿ ಮಣ್ಣು ಸಂಗ್ರಹಗೊಂಡು ನೀರು ಗದ್ದೆಯಲ್ಲಿ ಹರಿಯುತ್ತಿದೆ.

ಶಾಲೆಗೆ ನುಗ್ಗಿದ ನೀರು: ಕೊಟ್ಟಮುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಶಾಲೆಯೊಳಗಿದ್ದ ಪುಸ್ತಕಗಳು, ದಾಖಲಾತಿ, ಬಿಸಿಯೂಟದ ಸಾಮಗ್ರಿಗಳು ಕೆಸರು ನೀರಿನಿಂದ ಹಾಳಾಗಿವೆ. ಶಾಲೆಯೊಳಗೆ ತ್ಯಾಜ್ಯ ತುಂಬಿ ಅದನ್ನು ಸ್ವಚ್ಛಗೊಳಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸಾವಿತ್ರಿ. -ಪ್ರಭಾಕರ್