ಆಲೂರು ಸಿದ್ದಾಪುರ, ಆ. 16: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಂಬಿ ಗ್ರಾಮದ ದೊಡ್ಡೇರೆ ಅರಣ್ಯದಲ್ಲಿ; ನಾಲ್ಕು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರ ಅಸ್ಥಿ ಪಂಜರ ಪತ್ತೆಯಾಗಿದೆ. ಮಾಲಂಬಿ ಗಿರಿಜನ ಹಾಡಿಯ ನಿವಾಸಿ ಪಾಪು ಎಂಬವರ ಪತ್ನಿ ಸುಶೀಲ (30) ಎಂಬವರ ಶವದ ಅಸ್ಥಿ ಪಂಜರ ಇದಾಗಿದೆ ಎಂದು ಮೃತಳ ಬಂಧುಗಳು ಖಚಿತಪಡಿಸಿದ್ದಾರೆ.ದುರ್ದೈವಿ ಮಹಿಳೆ ಸುಶೀಲ ಅವರ ಪತಿ ಪಾಪು ಹಾಗೂ ಸಹೋದರಿ ಶೀಲ ಎಂಬವರು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮೃತೆ ಸುಶೀಲ ಅವರನ್ನು ನಾಲ್ಕು ತಿಂಗಳ ಹಿಂದೆ ಗ್ರಾಮದ ಕುಮಾರ್ ಹಾಗೂ ಇತರರು ಕೂಲಿ ಕೆಲಸಕ್ಕೆ ಕರೆದೊಯ್ದಿದ್ದು; ಈ ಸಂದರ್ಭ ಅತ್ಯಾಚಾರವೆಸಗಿ ಕೊಲೆಗೈದಿರವರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಅಸ್ಥಿ ಪಂಜರದೊಂದಿಗೆ ಪತ್ತೆಯಾಗಿರುವ ಉಡುಪನ್ನು; ಕಾಣೆ ಯಾದ ದಿನ ಸುಶೀಲ ಧರಿಸಿದ್ದಾಗಿ ಖಾತರಿಪಡಿಸಿದ್ದಾರೆ. (ಮೊದಲ ಪುಟದಿಂದ) ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಶನಿವಾರಸಂತೆ ಪೊಲೀಸರು ಸ್ಥಳ ಮಹಜರು ನಡೆಸಿ; ಶಂಕಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯ ನಡೆದಿರುವ ಸ್ಥಳಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಭೇಟಿ ನೀಡಿ ಮಾಹಿತಿ ಕಲೆಹಾಕುವದರೊಂದಿಗೆ ತನಿಖೆ ಕೈಗೊಂಡಿದ್ದಾರೆ. -ಕೆ.ಎನ್. ದಿನೇಶ್, ನರೇಶ್,