ಚೆಟ್ಟಳ್ಳಿ, ಆ. 16: ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕಾವೇರಿ ಪ್ರವಾಹದಿಂದ ನದಿ ದಡ ನಿವಾಸಿಗಳು ಮನೆ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿದ್ದು, ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಜೈನಿ ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ, ಗುಹ್ಯ, ಕೂಡುಗದ್ದೆ, ಕರಡಿಗೋಡು, ಕೊಂಡಂಗೇರಿ, ನೆಲ್ಲಿಹುದಿಕೇರಿಯ ಮುತ್ತಪ್ಪ ದೇವಸ್ಥಾನ, ಮದರಸ, ಶಾದಿ ಮಹಲ್ ಹಾಗೂ ಶಾಲೆಗಳಲ್ಲಿ ನೆಲೆಸಿರುವ ಸಂತ್ರಸ್ತರನ್ನು ಭೇಟಿ ಮಾಡಲಾಗಿದೆ. ನದಿ ದಡದಲ್ಲಿ ಎಲ್ಲಾ ಜನಾಂಗದವರು ವಾಸವಾಗಿದ್ದು, ಪ್ರವಾಹ ಸಂದರ್ಭದಲ್ಲಿ ಜಾತಿ ಮತ ಬೇಧವಿಲ್ಲದೆ ಒಗ್ಗೂಡಿ ರಕ್ಷಣೆ ಮಾಡುವ ಮೂಲಕ ಪರಿಹಾರ ಕೇಂದ್ರಗಳಲ್ಲಿ ತುರ್ತು ವ್ಯವಸ್ಥೆ ಕೈಗೊಂಡಿರುವದು ಅಭಿನಂದನಾರ್ಹವಾಗಿದೆ ಎಂದರು.
ಈ ಸಂದರ್ಭ ರಾಜ್ಯ ಸಮಿತಿಯ ಪ್ರಮುಖರಾದ ಹಂಸ ಸಖಾಫಿ, ಅಹ್ಮದ್ ಸಖಾಫಿ,ದಕ್ಷಿಣ ಕನ್ನಡ ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್ ಕಿನಾರೆ, ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಹಫೀಳ್ ಸಹದಿ, ಪ್ರಮುಖರಾದ ಕೆ.ಎಂ. ಸಯ್ಯದ್ ಭಾವ, ಉಸ್ಮಾನ್, ಅಬ್ದುಲ್ಲಾ, ಹಮ್ಜಾ, ಸೀಯಾಬುದ್ದೀನ್ ಸೇರಿದಂತೆ ಮತ್ತಿತರರು ಇದ್ದರು
ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಂಡಂಗೇರಿ ಭಾಗಕ್ಕೆ ಬಡವರ ಬೆಳಕು ಸಂಸ್ಥೆಯಿಂದ ಪುನರ್‍ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೊಂಡಂಗೇರಿ ನಿವಾಸಿ ಅಬ್ದುಲ್ ಹಾಜಿ ಲಕ್ಷಾಂತರ ರೂಪಾಯಿಗಳ ಜಾಗವನ್ನು ಸುನ್ನಿ ಮುಸ್ಲಿಂ ಜಮಾಹತ್ ಕೊಂಡಂಗೇರಿ ಇವರಿಗೆ ದಾನ ಮಾಡಿದ್ದು, ಅಬ್ದುಲ್ಲಾ ಹಾಜಿ ಅವರನ್ನು ಅಭಿನಂದಿಸಲಾಯಿತು. ಹಾಗೂ ಜಿಲ್ಲಾಡಳಿತ ಮತ್ತು ಸರಕಾರವನ್ನು ನಿವೇಶನ ಕಲ್ಪಿಸಲು ಬೇಕಾದ ದಾಖಲೆ ಮತ್ತು ಕಡತಗಳನ್ನು ಮಾಡಿಕೊಟ್ಟು ದಾನಿಗಳಿಗೆ ಸಹಕರಿಸಬೇಕೆಂದು ಮನವಿ ಮಾಡುವದಾಗಿ ನೌಶಾದ್ ಜನ್ನತ್ ತಿಳಿಸಿದರು. ಕೊಡಗಿನ ಬಡವರ ಬೆಳಕು ಅಧ್ಯಕ್ಷ ಎಂ.ಎಚ್. ಮೊಹಮ್ಮದ್, ಅಶ್ರಫ್, ಜಲೀಲ್, ಮಜೀದ್, ರಫೀಕ್, ಶಫೀಕ್, ನಾಸಿರ್ ಭಾಗವಹಿಸಿದ್ದರು.