ಸಿದ್ದಾಪುರ, ಆ. 16: ನದಿ ತೀರದ ನಿವಾಸಿಗಳಿಗೆ ತುರ್ತಾಗಿ ಸೂರು ಒದಗಿಸಲು ಜಾಗವನ್ನು ಗುರುತಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉಪವಿಭಾಗಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ಅವರಿಗೆ ಆದೇಶ ನೀಡಿದರು.
ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನೀಡುವ ತುರ್ತು ಪರಿಹಾರ ಹಾಗೂ ಚೆಕ್‍ಗಳನ್ನು ಶಾಸಕರು ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ನದಿತೀರದಲ್ಲಿ ವಾಸಿಸುವ ನಿವಾಸಿಗಳಿಗೆ ಹಾಗೂ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಮುಂದಿನ 2 ತಿಂಗಳ ಒಳಗೆ ಶಾಶ್ವತ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಲು ಜಿಲ್ಲಾ ಉಪವಿಭಾಗಾಧಿಕಾರಿ ಹಾಗೂ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅವರಿಗೆ 10 ಎಕರೆ ಜಾಗವನ್ನು ಗುರುತಿಸಿ ಸಂತ್ರಸ್ತರಿಗೆ ಅವಕಾಶ ಕಲ್ಪಿಸಲು ಆದೇಶ ನೀಡಿದರು.
ಯಾವದೇ ಕಾರಣಕ್ಕೂ ನದಿದಡದಲ್ಲಿ ವಾಸ ಮಾಡಲು ಅವಕಾಶ ನೀಡುವದಿಲ್ಲ. ಈಗಿರುವ ನಿವಾಸಿಗಳು ತಾತ್ಕಾಲಿಕವಾಗಿ ವಾಸ ಮಾಡಬಹುದು; ಸರ್ಕಾರ ಶಾಶ್ವತ ಸೂರು ಒದಗಿಸಿದ ನಂತರ ಎಲ್ಲರೂ ನದಿತೀರವನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಸರ್ಕಾರದ ವತಿಯಿಂದಲೇ ಕ್ರಮ ಕೈಗೊಂಡು ನೆಲಸಮಗೊಳಿಸುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಸರ್ಕಾರವು ನದಿ ಪಾತ್ರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಪರಿಹಾರ ಕೇಂದ್ರ ತೆರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗುದೆಂದರು. ಮುಂದಿನ ದಿನಗಳಲ್ಲಿ ಯಾರಾದರೂ ನದಿ ತೀರದಲ್ಲಿ ಮನೆ ನಿರ್ಮಿಸಿ ವಾಸ ಮಾಡಿದ್ದಲ್ಲಿ ಆಯ ವ್ಯಾಪ್ತಿಯ ಕಂದಾಯ ಪರಿವೀಕ್ಷಕ ಹಾಗೂ ಗ್ರಾಮ ಲೆಕ್ಕಗರನ್ನು ಹೊಣೆ ಮಾಡಿ ಅವರನ್ನು ಅಮಾನತುಗೊಳಿಸಲಾಗುವದೆಂದು ಎಚ್ಚರಿಸಿದರು.
ಪರಿಹಾರ ಕೇಂದ್ರಗಳನ್ನು ಬಿಟ್ಟು ಮನೆಯತ್ತ ತೆರಳುವ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ ತುರ್ತಾಗಿ ರೂ. 10 ಸಾವಿರ ಹಾಗೂ ಅಕ್ಕಿ ಹಾಗೂ ಇನ್ನಿತರ ಅಗತ್ಯ ವಸ್ತುಗಳಿರುವ ಕಿಟ್ ಅನ್ನು ನೀಡಲಾಗುತ್ತಿದೆಂದರು. ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 270 ಮಂದಿ ಸಂತ್ರಸ್ತರಿಗೆ ಪರಿಹಾರ ಧನ ಹಾಗೂ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹಾದ ಆಶ್ರಫ್, ವಿಎಸ್‍ಎಸ್‍ಎನ್ ಅಧ್ಯಕ್ಷ ಪಿ.ಸಿ. ಅಚ್ಚಯ್ಯ, ಉಪವಿಭಾಗಾಧಿಕಾರಿ ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಪ್ರಬಾರ ಉಪವಿಭಾಗ ಅಧಿಕಾರಿ ಮಹಮ್ಮದ್ ನಹೀಂ, ನೋಡಲ್ ಅಧಿಕಾರಿ ಕುಮಾರ್, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್ ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
- ವಾಸು