ಮಡಿಕೇರಿ, ಆ. 16: ಶಾಲಾ-ಕಾಲೇಜುಗಳಿಗೆ ರಜೆ ಬಂದರೆ ಮಕ್ಕಳಿಗೆ ಸಂಭ್ರಮ; ದಿನವಿಡೀ ಮನೆಯಲ್ಲೇ ಇರಬಹುದೆಂಬ ಹಂಬಲ-ಆನಂದ ಹಾಗಿದ್ದರೂ, ಕೆಲ ಮಕ್ಕಳು ತಮ್ಮ ಮನೆಗಳಿಗೆ ತೆರಳದೆ ಸುಮಾರು 6 ದಿವಸಗಳಾಯಿತು. ತಾಯಂದಿರಲ್ಲಿ ಮಾತನಾಡಲೂ ಸಮಯವಿಲ್ಲ ಹಾಗೂ ಮೊಬೈಲ್ ನೆಟ್ವರ್ಕ್ ಕೂಡಾ ಇಲ್ಲ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸೇರಿದಂತೆ ಕಾವೇರಿ ಕಾಲೇಜು ಹಾಗೂ ಗೋಣಿಕೊಪ್ಪಲಿನ ಕೆಲವು ಕಾಲೇಜುಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ರಜದ ಸಮಯದಲ್ಲಿ ಪ್ರಕೃತಿ ವಿಕೋಪದಲ್ಲಿ ಸಿಲುಕಿದವರ ಸೇವೆಯನ್ನು ಮಾಡುತ್ತಿರುವದು ಶ್ಲಾಘನೀಯ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಮೇಜರ್ ಡಾ. ರಾಘವ್ ಬಿ. ಅವರ ನೇತೃತ್ವದಲ್ಲಿ ಹಾಗೂ ಕಮಾಂಡ್ ಆಫೀಸರ್ ಕರ್ನಲ್ ವಿ.ಎಂ. ನಾಯಕ್ ಸಲಹೆಯ ಮೇರೆಗೆ ಕಾರ್ಯಪ್ಪ ಕಾಲೀಜಿನ ಸುಮಾರು 50 ವಿದ್ಯಾರ್ಥಿಯರು ಕೊಂಡಂಗೇರಿ, ಕರಡಿಗೋಡು, ಗುಹ್ಯ, ಭಾಗಮಂಡಲ, ಹೊದ್ದೂರು, ಮೂರ್ನಾಡು ಹಾಗೂ ಇನ್ನಿತರ 10 ಹಲವು ಪ್ರದೇಶಗಳಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲೇ ತಂಗಿ 24 ಗಂಟೆ ಸೇವೆಯಲ್ಲಿ ತೊಡಗಿಕೊಂಡಿದ್ದರೆ, ವಿದ್ಯಾರ್ಥಿನಿಯರು ಬೆಳಗ್ಗಿನ ಜಾವದಿಂದ ಸಂಜೆಯವರೆಗೆ ತೊಡಗಿಕೊಂಡಿದ್ದಾರೆ. ಎ.ಪಿ.ಎಂ.ಸಿ. ಕೇಂದ್ರಗಳಲ್ಲಿ ಸಂಗ್ರಹವಿರುವ ಪರಿಹಾರ ವಸ್ತುಗಳನ್ನು ವಿತರಿಸುವದರಿಂದ ಹಿಡಿದು, ಅದನ್ನು ಪ್ಯಾಕ್ ಮಾಡುವದಲ್ಲದೆ ಸಂತ್ರಸ್ತರಿಗೆ ಊಟ ಬಡಿಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು.