ಮಡಿಕೇರಿ, ಆ. 16: ಬಿಲ್ಲವ ಸಮಾಜ ಸೇವಾ ಸಂಘ, ಮಡಿಕೇರಿ ತಾಲೂಕು ಮತ್ತು ಫ್ರೆಂಡ್ಸ್ ಕಾಪುಮಜಲು, ವಿಟ್ಲ ಸಂಯುಕ್ತಾಶ್ರಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ, ಆಟಿಡೊಂಜಿ ದಿನ ಕಾರ್ಯಕ್ರಮವು ಮಡಿಕೇರಿಯ ಕೋಟೆ ಮಹಿಳಾ ಸಮಾಜದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಬಿಲ್ಲವ ಸಮಾಜದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಕಾಪುಮಜಲು ಅಧ್ಯಕ್ಷ ಮನೋಜ್ ಕುಮಾರ್ ವಿಟ್ಲ ಆಗಮಿಸಿದ್ದರು. ಅವರು ಕಳೆದ ವರ್ಷ ಮಳೆಯಿಂದಾಗಿ ಸಂತ್ರಸ್ತರಾದ ಸಂದರ್ಭ ನಮ್ಮ ಸಂಘದಿಂದ ಒಂದು ಲಾರಿಯಷ್ಟು ಸಾಮಗ್ರಿಗಳನ್ನು ಕಳುಹಿಸಿದ್ದೆವು ಮತ್ತು ಸೂರು ಕಳೆದುಕೊಂಡ ನಮ್ಮ ಬಾಂಧವರಿಗೆ ಸಣ್ಣ ಸಹಾಯ ಮಾಡಬೇಕೆಂದು ತೀರ್ಮಾನಿಸಲಾಯಿತು. ಅಂತೆಯೇ ಈ ಬಗ್ಗೆ ಮಡಿಕೇರಿಯ ರವೀಂದ್ರ ಮತ್ತು ಮನೋಹರ ಅವರನ್ನು ಸಂಪರ್ಕಿಸಿದಾಗ ಮಡಿಕೇರಿಯ ಬಿಲ್ಲವ ಸಮಾಜದ ಮುಖೇನ ವಿತರಿಸುವ ಎಂದರು. ಅಂತೆಯೇ ಈ ದಿನ ಸೂರು ಕಳೆದುಕೊಂಡವರಿಗೆ ಧೈರ್ಯ ತುಂಬುವಂತಹ ಕಾರ್ಯಕ್ರಮ ನಡೆಯುತ್ತಿದೆ. ನಮಗೆ ಸಮಾಜ ನೀಡಿದ್ದನ್ನು ಹಿಂದಿರುಗಿಸಿ ಸಮಾಜಕ್ಕೆ ನೀಡುತ್ತಿದ್ದೇವೆ ಎಂದರು. ತಲಾ 5 ಸಾವಿರದಂತೆ ಸೂರು ಕಳೆದುಕೊಂಡ 10 ಮಂದಿಗೆ ಒಟ್ಟು 50 ಸಾವಿರ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕಾಪುಮಜಲುವಿನ ಕಾರ್ಯಾಧ್ಯಕ್ಷ ಮನೋಜ್, ಕಾರ್ಯದರ್ಶಿ ಪ್ರವೀಣ್, ಸದಸ್ಯರಾದ ಚರಣ್, ದೇವದಾಸ್, ಜನಾರ್ಧನ್ ಮತ್ತು ದಿನೇಶ್ ಪಾಲ್ಗೊಂಡಿದ್ದರು. ಶಶಿಕಲಾ ಪ್ರಾರ್ಥಿಸಿದರು. ಬಿ.ಕೆ. ಮಹೇಶ ಸ್ವಾಗತಿಸಿದರು. ಪಿ.ವಿ. ಆನಂದ ನಿರೂಪಿಸಿ, ವಂದಿಸಿದರು.

ಆಟಿಡೊಂಜಿ ದಿನ : ಆಟಿಡೊಂಜಿ ದಿನ ಕಾರ್ಯಕ್ರಮವು ಲೀಲಾವತಿಯವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷತೆ ಮತ್ತು ಆ ದಿನಗಳಲ್ಲಿ ನೈಸರ್ಗಿಕವಾಗಿ ದೊರಕುವ ಔಷಧಿಯ ಗುಣವುಳ್ಳ ಆಹಾರದ ಬಗ್ಗೆ ಹಿರಿಯರು ವಿವರಿಸಿದರು. ಪತ್ರೋಡೆ, ಅಣಬೆ, ಬಾಳೆ ಹೂವಿನ ಪಲ್ಯ, ಕಣಿಲೆ, ಕೆಸದ ಚಟ್ನಿ, ಇಡ್ಲಿ, ಪುಂಡಿ, ರೊಟ್ಟಿ, ಆಟಿಪಾಯಸ, ಒಂದೆಲಗ ಚಟ್ನಿ ಆಟಿ ತಿಂಗಳಲ್ಲಿ ದೊರಕುವ ವಿಶೇಷ ಖಾದ್ಯಗಳನ್ನು ಸದಸ್ಯರು ತಮ್ಮ ಮನೆಯಲ್ಲೇ ತಯಾರಸಿ ತಂದು ಎಲ್ಲರೊಂದಿಗೆ ಸಹಭೋಜನ ಮಾಡಿದರು.