ಕುಶಾಲನಗರ, ಆ. 16: ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರ ಧನ ಚೆಕ್ ವಿತರಿಸಿದರು.

ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಅಂದಾಜು 267 ನೆರೆ ಸಂತ್ರಸ್ತರು ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಕೆಲವು ಕುಟುಂಬ ಮನೆ ಕಳೆದುಕೊಂಡಿದ್ದು ಇನ್ನೂ ಕೆಲವರು ಮನೆಗೆ ನೀರು ನುಗ್ಗಿದ ಹಿನ್ನೆಲೆ ಕೇಂದ್ರದಲ್ಲಿ ನೆಲೆಸಿದ್ದರು. ಪ್ರತಿಯೊಬ್ಬ ಸಂತ್ರಸ್ತರಿಗೆ ತಲಾ ರೂ. 10 ಸಾವಿರಗಳ ಚೆಕ್ ವಿತರಣೆ ಮಾಡಲಾಯಿತು.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 602 ಮನೆಗಳಿಗೆ ನೀರು ನುಗ್ಗಿದ್ದು 20 ಮನೆಗಳು ಪೂರ್ಣ ನೆಲಸಮವಾಗಿವೆ. ಉಳಿದ ಮನೆಗಳು ಅಲ್ಪ ಪ್ರಮಾಣದ ಹಾನಿಯಾಗಿದ್ದು ಎಲ್ಲಾ ಸಂತ್ರಸ್ತರಿಗೂ ತಕ್ಷಣ ಪರಿಹಾರವಾಗಿ ರೂ. 10 ಸಾವಿರ ನೀಡಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು. ಇನ್ನುಳಿದಂತೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉಳಿದ ಪರಿಹಾರವನ್ನು ಕೂಡಲೇ ನೀಡುವದಾಗಿ ಅವರು ಹೇಳಿದರು. ಕುಶಾಲನಗರದ ಕೇಂದ್ರವನ್ನು ಗುರುವಾರ ಸ್ಥಗಿತಗೊಳಿಸಿದ್ದು ಎಲ್ಲಾ ಸಂತ್ರಸ್ತರು ತಮ್ಮ ಮನೆಗೆ ತೆರಳಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರು ಬದಲಿ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾಹಿತಿ ನೀಡಿದರು. ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ಜನಪ್ರತಿನಿಧಿಗಳು ಇದ್ದರು.