ಮಡಿಕೇರಿ, ಆ. 16: ದೂರದ ಒಡಿಶಾ ರಾಜ್ಯದಿಂದ ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದ ಯುವಕನೋರ್ವ; ಮತಾಂತರಗೊಂಡು ಇಲ್ಲಿನ ಮಹಿಳೆಯೊಬ್ಬಳನ್ನು ವಿವಾಹವಾಗುವ ದರೊಂದಿಗೆ; ಎರಡು ವರ್ಷಗಳ ಬಳಿಕ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರಸಂಗವೊಂದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ತ್ಯಾಗರಾಜ ನಗರದ ನಿವಾಸಿ, ಅನ್ಯಕೋಮಿನ ಮೂವತೈದರ ಹರೆಯದ ಮಹಿಳೆ ಈ ಸಂಬಂಧ ನಗರಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದು; ಒಡಿಶಾ ರಾಜ್ಯದ ಶೇಷಾದ್ರಿ ಬಾದಿ ಎಂಬವರ ಪುತ್ರ ಸತ್ಯಪ್ರಕಾಶ್ ಬಾದಿ (25) ಎಂಬವರು ಇಲ್ಲಿಗೆ ಉದ್ಯೋಗ ಅರಸಿ ಬಂದಿದ್ದಾಗಿ ತಿಳಿದು ಬಂದಿದೆ.

ಈ ವೇಳೆ ಸ್ಥಳೀಯ ಅನ್ಯಕೋಮಿನ ಮಹಿಳೆಯ ಪರಿಚಯವಾಗಿ; ಕೇರಳದ ಪೊನ್ನಾಣಿಯಲ್ಲಿ ಸತ್ಯಪ್ರಕಾಶ್ ಬಾದಿ ನಾಲ್ಕು ತಿಂಗಳು ತರಬೇತಿಗೊಂಡು ಶಹಾಲ್ ಆಗಿ ಪರಿವರ್ತನೆಗೊಳ್ಳುವ ಮುಖಾಂತರ; ಇಸ್ಲಾಂ ಪದ್ಧತಿಯಂತೆ ಆಕೆಯನ್ನು ವಿವಾಹ ಮಾಡಿ ಕೊಂಡಿರುವದಾಗಿ ತಿಳಿದು ಬಂದಿದೆ.

ಮಾತ್ರವಲ್ಲದೆ 2 ವರ್ಷ ಆಕೆಯೊಂದಿಗೆ ಸಂಸಾರ ನಡೆಸಿರುವ ಈ ವ್ಯಕ್ತಿ ತಾ. 7.6.2019 ರಂದು ಸ್ಥಳೀಯ ರೆಸಾರ್ಟ್‍ವೊಂದರಲ್ಲಿ ಕೆಲಸಕ್ಕೆಂದು ತೆರಳುವದರೊಂದಿಗೆ ಮರಳಿ ಬಂದಿಲ್ಲವೆಂದು; ಒಡಿಶಾದಲ್ಲಿ ಸಂಪರ್ಕಿಸಲಾಗಿ ಸತ್ಯಪ್ರಕಾಶ್ ಹುಟ್ಟೂರಿಗೂ ತಲಪಿಲ್ಲವೆಂದು ತಿಳಿದು ಬಂದಿದೆ. ಆ ಮೇರೆಗೆ ಸ್ಥಳೀಯ ಮಹಿಳೆ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು; ಪೊಲೀಸ್ ಠಾಣೆಯಲ್ಲಿ ಸತ್ಯಪ್ರಕಾಶ್ ಬಾದಿ ಅಲಿಯಾಸ್ ಶಹಾಲ್ ನಾಪತ್ತೆ ಕುರಿತು ಮೊಕದ್ದಮೆ ದಾಖಲಾಗಿದೆ.