ಗೋಣಿಕೊಪ್ಪ, ಆ.16: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಇದನ್ನು ಸರಿಪಡಿಸಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಕೆ.ಜಿ.ಬೋಪಯ್ಯ ಸೂಚಿಸಿದ್ದಾರೆ.

ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹಿರಿಯ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವೀರಾಜಪೇಟೆ ತಾಲೂಕಿನ ಬಿರುನಾಣಿ, ತೋರ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ತಂತಿಗಳು ಕೆಳಗೆ ಬಿದ್ದಿರುವದು, ಕಂಬಗಳು ಮುರಿದಿರುವದು, ಟ್ರಾನ್ಸ್‍ಫಾರ್ಮರ್‍ಗಳು ಸುಟ್ಟು ಹೋಗಿರುವದು ಹೀಗೆ ಹಲವು ರೀತಿಯ ಸಮಸ್ಯೆಗಳು ಉಂಟಾಗಿದ್ದು, ಜನರು ಕತ್ತಲೆಯಲ್ಲಿ ಬದುಕು ದೂಡುವಂತಾಗಿದೆ. ಆದ್ದರಿಂದ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಮಡಿಕೇರಿ-ವೀರಾಜಪೇಟೆ ಮಾರ್ಗದಲ್ಲಿ 66 ಕೆ.ವಿ. ವಿದ್ಯುತ್ ಪರಿವರ್ತಕ ಅಳವಡಿಸುವದು, ಮೂರ್ನಾಡು-ಸಿದ್ದಾಪುರ ಮತ್ತು ಶ್ರೀಮಂಗಲ ಮಾರ್ಗ 33 ಕೆ.ವಿ.ಯಿಂದ 66 ಕೆ.ವಿ.ಗೆ ವಿದ್ಯುತ್ ಪರಿವರ್ತಕ ಅಳವಡಿಸುವದು, ಬಾಳೆಲೆ-ನಾಪೋಕ್ಲು-ಕುಟ್ಟ ಮಾರ್ಗದಲ್ಲಿ 66 ಕೆ.ವಿ.ಹೊಸ ಸಬ್‍ಸ್ಟೇಷನ್ ಅಳವಡಿಸುವಂತೆ ಕೆ.ಜಿ.ಬೋಪಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ವೀರಾಜಪೇಟೆ ಪಟ್ಟಣದಲ್ಲಿ ವಿದ್ಯುತ್ ಉಪ ವಿಭಾಗ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೆಸ್ಕ್ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳಿಗೆ ಶಾಸಕರು ಸೂಚಿಸಿದರು. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಅತಿವೃಷ್ಟಿಯಿಂದಾಗಿ ವಿದ್ಯುತ್ ಸಮಸ್ಯೆಗಳು ಸಾಕಷ್ಟು ಇರುವದರಿಂದ ಲೈನ್‍ಮೆನ್‍ಗಳನ್ನು ನಿಯೋಜಿಸುವದು ಮತ್ತಿತರ ಬಗ್ಗೆ ಅವರು ಸಲಹೆ ಮಾಡಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ, ತಾಂತ್ರಿಕ ಅಧಿಕಾರಿ ಅಹಮ್ಮದ್, ಅಧೀಕ್ಷಕ ಎಂಜಿನಿಯರ್ ಮಹದೇವಸ್ವಾಮಿ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಂಕಯ್ಯ, ಸುರೇಶ್ ಮತ್ತಿತರರು ಇದ್ದರು.