ಕುಶಾಲನಗರ, ಆ. 16: ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂಗಳನ್ನು ದಾನ ಮಾಡಿದ ಘಟನೆ ನಡೆದಿದೆ.
ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಕಳೆದ 3 ವರ್ಷಗಳಿಂದ ಸಲೂನ್ ನಡೆಸುತ್ತಿದ್ದ ಮೂಲತಃ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ ನಿವಾಸಿ ಎಸ್.ಎ. ಧರ್ಮ 14 ರಂದು ಚುಂಚನಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈತನನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಧರ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಇಚ್ಚೆಯನುಸಾರ ಕುಟುಂಬ ವರ್ಗ ಆತನ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಹೃದಯ, ಕಿಡ್ನಿ, ಕಣ್ಣು, ಶ್ವಾಸಕೋಶವನ್ನು ಮೈಸೂರಿನ ಅಪೋಲೊ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ರವಾನಿಸಲಾಯಿತು.
ಸವಿತಾ ಸಮಾಜದ ಅವಿವಾಹಿತ ಯುವಕ ಸಾವಿನ ನಂತರವೂ ಪರೋಪಕಾರಿಯಾಗಿ ಸಾರ್ಥಕತೆ ಮೆರೆದಿರುವದು ನಿಜಕ್ಕೂ ಇತರರಿಗೆ ಮಾದರಿ ಎನ್ನಬಹುದು.