*ಗೋಣಿಕೊಪ್ಪಲು, ಆ. 16: ಇಲ್ಲಿನ ಕಾವೇರಿ ಕಾಲೇಜಿನ ಎನ್ಸಿಸಿ ಘಟಕ ಹಾಗೂ ವೀರಾಜಪೇಟೆ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಳೆಹಾನಿ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ತೆರಳಿ ತಿಂಡಿ ತಿನಿಸು, ವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಗೋಣಿಕೊಪ್ಪಲಿನ ಸರಕಾರಿ ಪ್ರಾಥಮಿಕ ಶಾಲಾ ಸಂತ್ರಸ್ತರ ಕೇಂದ್ರದ 150, ಸಿದ್ದಾಪುರ ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಸಂತ್ರಸ್ತರ ಕೇಂದ್ರದ 145 ಜನರಿಗೆ ಸಿಹಿ ತಿಂಡಿ ಮತ್ತು ವಸ್ತ್ರಗಳನ್ನು ವಿತರಿಸಲಾಯಿತು.
ಕರಡಿಗೋಡಿನ ನೆರೆ ಪೀಡಿದ ಪ್ರದೇಶಗಳಿಗೆ ಎನ್ಸಿಸಿ ಕೆಡೆಟ್ಗಳು 3 ಕಿ.ಮೀ. ದೂರ ಕಾಲು ನಡಿಗೆಯಲ್ಲಿ ಕ್ರಮಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ದಂತ ವೈದ್ಯಕೀಯ ಕಾಲೇಜಿನ ಡಾ. ಆನಂದ್, ಎನ್ಸಿಸಿ ಅಧಿಕಾರಿ ಎಂ.ಆರ್. ಅಕ್ರಂ, ವಿದ್ಯಾರ್ಥಿ ನಾಯಕರಾದ ರಜಿತ್, ನಿಕೇಶ್, ಅಶ್ವಿನ್, ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಾಯಕರಾದ ಪ್ರಜ್ವಲ್ ಹಾಜರಿದ್ದರು. ಎನ್ಸಿಸಿ ಘಟಕದ 25, ದಂತ ವೈದ್ಯಕೀಯ ಕಾಲೇಜು ಎನ್ಎಸ್ಎಸ್ನ 25 ಸ್ವಯಂ ಸೇವಕರು ಪಾಲ್ಗೊಂಡಿದ್ದರು.